ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆ ಶೇ. 50ರಷ್ಟು ಬಯಲುಸೀಮೆ ಪ್ರದೇಶವಾಗಿದೆ. ಸಾಮಾನ್ಯವಾಗಿ ರೈತರು ಇಲ್ಲಿನ ಹವಾಗುಣಕ್ಕೆ ಪೂರಕವಾಗಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಅದರಲ್ಲಿ ಪುಷ್ಪ ಕೃಷಿ ಕೂಡ ರೈತರಿಗೆ ವರದಾನವಾಗಿ ಪರಿಣಮಿಸಿದೆ.
ಜಿಲ್ಲೆಯ ಮಧುಗಿರಿ, ಕೊರಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಕನಕಾಂಬರ ಹೂವಿನ ಕೃಷಿಯಲ್ಲಿ ರೈತರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಸದ್ದಿಲ್ಲದೆ ಕನಕಾಂಬರ ಹೂವನ್ನು ಬೆಳೆದಿರುವ ರೈತರು ಕೈ ತುಂಬಾ ಹಣ ಗಳಿಸುತ್ತಿದ್ದಾರೆ. ಆರಂಭಿಸಿದ ನಾಲ್ಕು ತಿಂಗಳ ನಂತರ ನಿರಂತರವಾಗಿ ಎರಡು ವರ್ಷಗಳ ಕಾಲ ಉತ್ತಮ ಇಳುವರಿ ನೀಡುವಂತಹ ಕನಕಂಬರ ಹೂವಿನ ಗಿಡಗಳು ರೈತರನ್ನು ಕೈಹಿಡಿದಿವೆ. ಅಲ್ಲದೆ ಆರ್ಥಿಕವಾಗಿ ಸದೃಢವಾಗಿಸಿವೆ.
ಬಯಲುಸೀಮೆಯಲ್ಲಿ ನೀರಿನ ಲಭ್ಯತೆ ಕಡಿಮೆ ಇರುವುದರಿಂದ ಕನಿಷ್ಠ ಪ್ರಮಾಣದ ನೀರನ್ನು ಬಳಸಿ ಕನಕಾಂಬರ ಕೃಷಿಯನ್ನು ಮಾಡಬಹುದಾಗಿದೆ. ಈ ರೀತಿಯ ಕೃಷಿ ಪದ್ಧತಿಯನ್ನು ಕಂಡುಕೊಂಡಿರುವ ತುಮಕೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಸದ್ದಿಲ್ಲದೆ ಆರ್ಥಿಕ ಸಂಕಷ್ಟದಿಂದ ಪಾರಾಗಿದ್ದಾರೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸೇವಂತಿ ಹಾಗೂ ಕನಕಾಂಬರ ಹೂವಿಗೆ ಬಹು ಬೇಡಿಕೆ ಇರುತ್ತದೆ. ಹೀಗಾಗಿ ಕನಕಾಂಬರ ಹೂವಿಗೆ ಬೆಂಗಳೂರು, ಕೋಲಾರ, ಹಾಸನ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದೆ.