ತುಮಕೂರು: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕಾಲೇಜಿನ ಆವರಣವನ್ನು ಅಲ್ಲಿನ ಪ್ರಾಂಶುಪಾಲರೇ ಪ್ರತಿದಿನ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಇಂತಹ ಮಾದರಿ ಪ್ರಾಂಶುಪಾಲರು ಇದ್ದಾರೆ ಎಂಬುದು ಹೆಮ್ಮೆಯ ವಿಚಾರ ಒಂದೆಡೆಯಾದರೆ, ಇಲ್ಲಿನ ಸಿಬ್ಬಂದಿ ಕೊರತೆ ಸಹ ಗಂಭೀರವಾದ ವಿಷಯವಾಗಿದೆ.
ಹೌದು, ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಚಿತ್ರಕಲಾ ಪದವಿ ಕಾಲೇಜಿಗೆ ಇದುವರೆಗೂ ಖಾಯಂ ಹುದ್ದೆಗಳ ನೇಮಕವಾಗಿಲ್ಲ. ಈ ಹಿಂದೆ ಪ್ರೌಢಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರನ್ನೇ ಇಲ್ಲಿಗೆ ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ. ಪ್ರಾಂಶುಪಾಲರಾದ ಸಿ.ಸಿ. ಭಾರಕೇರ ಮಾತ್ರ ಕಾಲೇಜಿನಲ್ಲಿ ಸಿಬ್ಬಂದಿಯಾಗಿದ್ದು, ಕಚೇರಿ ಕೆಲಸ, ವಿದ್ಯಾರ್ಥಿಗಳಿಗೆ ಪಾಠ, ಕಚೇರಿ ಹಾಗೂ ಕಾಲೇಜು ಆವರಣ ಸ್ವಚ್ಛಗೊಳಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಇವರೇ ನಿರ್ವಹಿಸುತ್ತಿದ್ದಾರೆ.
ಕಾಲೇಜು ಆರಂಭವಾದಾಗ ಸಿಬ್ಬಂದಿಗೆ ತಕ್ಕಂತೆ ವಿದ್ಯಾರ್ಥಿಗಳು ದಾಖಲಾತಿ ಆಗುತ್ತಿತ್ತು. 2010ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಂತ್ರಿಕ ಶಿಕ್ಷಣ ಇಲಾಖೆಗೆ ಚಿತ್ರಕಲಾ ಕಾಲೇಜನ್ನು ಸರ್ಕಾರ ಹಸ್ತಾಂತರ ಮಾಡಿತ್ತು. ಆ ನಂತರ ಬಹುತೇಕ ಚಿತ್ರಕಲಾ ಶಿಕ್ಷಕರು ಮತ್ತು ಸಿಬ್ಬಂದಿ ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ವಾಪಸ್ ಹೊರಟು ಹೋದರು. ಇದೀಗ ಕೇವಲ ಪ್ರಾಂಶುಪಾಲರೊಬ್ಬರೇ ಉಳಿದಿದ್ದಾರೆ.
ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆಗೆ ವರ್ಗಾವಣೆಗೊಂಡ ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಲೇಜಿನಲ್ಲಿ ಕಟ್ಟಡ ಸಮಸ್ಯೆ, ಸಿಬ್ಬಂದಿ ಕೊರತೆ, ಮೂಲ ಸೌಲಭ್ಯಗಳ ಸಮಸ್ಯೆ ಇದೆ. ಹೀಗಾಗಿ ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳಿಸದ ಪರಿಣಾಮ ವಿದ್ಯಾರ್ಥಿ ದಾಖಲಾತಿ ಕಡಿಮೆ ಇದೆ. ಅಗತ್ಯವಿರುವ 12 ಮಂದಿ ಸಿಬ್ಬಂದಿ ನೇಮಕಾತಿಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇದರ ಜೊತೆಗೆ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಸ್ವತಃ ಪ್ರಾಂಶುಪಾಲರೇ ಕಸಗುಡಿಸುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ.
ಧಾರವಾಡ ಹೊರತುಪಡಿಸಿದರೆ ರಾಜ್ಯದಲ್ಲಿರುವ ಎರಡನೇ ಸರ್ಕಾರಿ ಚಿತ್ರಕಲಾ ಕಾಲೇಜು ಜಿಲ್ಲೆಯಲ್ಲಿದೆ. ಉಳಿದಂತೆ ಅನೇಕ ಖಾಸಗಿ ಕಾಲೇಜುಗಳು ಕಂಡು ಬರುತ್ತವೆ.