ತುಮಕೂರು: ಜಿಲ್ಲೆಯ ಗುಬ್ಬಿ ಬಳಿ ಇಂದು ನಡೆಯಲಿರುವ ಎಚ್.ಎ.ಎಲ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಆವರಣದಲ್ಲಿ ಸಿದ್ಧವಾಗಿರುವ ಎತ್ತರದ ವೇದಿಕೆಯಲ್ಲಿ ಮೋದಿ ಹಾಗೂ ಗಣ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬಳಿಕ ಭದ್ರತಾ ದೃಷ್ಟಿಯಿಂದ 80 ಅಡಿ ದೂರದಷ್ಟು ‘ಡಿ’ ಜೋನ್ ನಿರ್ಮಾಣ ಮಾಡಲಾಗಿದೆ.
‘ಡಿ’ ಜೋನ್ ನಂತರ ಮಾಧ್ಯಮ ಹಾಗೂ ವಿವಿಐಪಿ ಆಸನದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 1,500 ಜನ ವಿಐಪಿಗಳು ಇರಲಿದ್ದು ಇವರಿಗೆ ಕುಳಿತುಕೊಳ್ಳಲು ವಿಶೇಷ ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. ಮುಖ್ಯ ವೇದಿಕೆಯ ಎಡ-ಬಲ ಭಾಗದಲ್ಲೂ ಆಸನದ ವ್ಯವಸ್ಥೆಯ ಜೊತೆಗೆ ಪ್ರತಿ 2 ಸಾವಿರ ಜನರಿಗೆ ಮೋದಿ ಭಾಷಣ ನೋಡಲು ಕೇಳಲು ನೋಡಲು ಅನುಕೂಲವಾಗುವಂತೆ ಒಟ್ಟು 60 ಎಲ್.ಇಡಿ ವಾಲ್ ಅಳವಡಿಕೆಯ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಇಡೀ ಕಾರ್ಯಕ್ರಮದಲ್ಲಿ ಪ್ರತಿ ಹೆಜ್ಜೆಗೂ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಭೇಟಿ ಜಿಲ್ಲಾ ಬಿಜೆಪಿಗೆ ಬೂಸ್ಟ್ ಅಪ್: ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 5 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೋದಿಯ ಈ ಭೇಟಿ ಕ್ಷೇತ್ರದ ಗೆಲುವಿನ ಸಂಖ್ಯೆ ವಿಸ್ತರಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಬಿಜೆಪಿ ಪಕ್ಷ ಸ್ಥಾಪನೆಯಾಗಿ ಇಲ್ಲಿವರೆಗೂ ಖಾತೆಯೇ ತೆರೆಯದ ಪಾವಗಡ, ಮಧುಗಿರಿ, ಕುಣಿಗಲ್, ಕೊರಟಗೆರೆ, ಗುಬ್ಬಿ ಕ್ಷೇತ್ರದಲ್ಲಿ ಪಕ್ಷವು ಸದೃಢವಾಗುದಲ್ಲದೆ, ಗೆಲುವಿಗೆ ಸಹಕಾರಿಯಾಗಲಿದೆ. ಜೊತೆಗೆ ಇವುಗಳಲ್ಲಿ ಎರಡರಿಂದ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
ವಿಶೇಷವಾಗಿ ಗುಬ್ಬಿ ಕ್ಷೇತ್ರದಲ್ಲೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಖಚಿತ ಎನ್ನಲಾಗುತ್ತಿದೆ. ಈಗಾಗಲೇ 2020 ರ ಉಪಚುನಾವಣೆ ಶಿರಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಬಾರಿಯೂ ಮೋದಿಯ ಭೇಟಿಯಿಂದ ಶಿರಾದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು, ಜಿಲ್ಲೆಗೆ ಮೋದಿ ಭೇಟಿಯಿಂದ 11 ಕ್ಷೇತ್ರಗಳ ಪೈಕಿ ಕನಿಷ್ಠ 10 ಕ್ಷೇತ್ರದಲ್ಲಿ ಬಿಜೆಪಿ ಜಯಿಸಲಿದೆ ಎನ್ನಲಾಗುತ್ತಿದೆ. ಇನ್ನು, ಬೃಹತ್ ಉದ್ಯಮ ಪ್ರಾರಂಭವಾಗುತ್ತಿದೆ ಎಂಬ ಸಂದೇಶ ಸಾರುವ ಮೂಲಕ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿಗೆ (ಮೋದಿ ಆಗಮನ) ಚುನಾವಣಾ ಸಮಯಕ್ಕೆ ಸಿಕ್ಕ ಪ್ರಬಲ ಅಸ್ತ್ರವಾಗಿದೆ. ಇದರಿಂದ ಹಳೇ ಮೈಸೂರು ಪ್ರಾಂತ್ಯದಲ್ಲಿಯೂ ಕೂಡ ಬಿಜೆಪಿಯು ಹೆಚ್ಚಿನ ಸ್ಥಾನ ಗಳಿಸಲು ಸಹಕಾರಿಯಾಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ಭದ್ರತೆ ಜೊತೆಗೆ ಸಿಸಿಟಿವಿ ಕಣ್ಗಾವಲು: ಮೋದಿ ಭೇಟಿ ಹಿನ್ನೆಲೆ ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ಜೊತೆಗೆ ಸಿಸಿಟಿವಿ ಕಣ್ಗಾವಲು ಇದ್ದು ಎಚ್.ಎ.ಎಲ್ ಘಟಕ ಹಾಗೂ ಕಾರ್ಯಕ್ರಮದ ಸುತ್ತಾ ಸಿಸಿಟಿವಿ ಆಳವಡಿಕೆ ಮಾಡಲಾಗಿದೆ. ಜೊತೆಗೆ ಕಾರ್ಯಕ್ರಮದ ವೇದಿಕೆ ಸುತ್ತಾ ಮುತ್ತಾ, ವಿವಿಐಪಿ-ವಿಐಪಿ ಆಗಮಿಸುವ ಮಾರ್ಗದಲ್ಲಿ ಸಮೇತ ಮುಂಜಾಗೃತ ಕ್ರಮವಾಗಿ ಸಿಸಿ ಆಳವಡಿಕೆ ಮಾಡಿದ್ದು, ಈ ಒಂದು ಕಾರ್ಯಕ್ರಮಕ್ಕೆ ಒಟ್ಟು 500 ಸಿಸಿಟಿವಿಯನ್ನು ಬಳಕೆ ಮಾಡಲಾಗಿದೆ. ಮುಖ್ಯವಾಗಿ ಕಾರ್ಯಕ್ರಮಕ್ಕೆ ಆಗಮಿಸುವವರ ಚಲನವಲಗಳನ್ನು ಗಮನಿಸಲು ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಇದ್ದು, ಯಾವುದೇ ಭದ್ರತಾ ಲೋಪವಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಲಿ: ಹೆಚ್ಡಿಕೆ