ತುಮಕೂರು: ಕಾಂಗ್ರೆಸ್‌ಗೆ ವಲಸೆ ಬರೋರ ಸಂಖ್ಯೆ ಹೆಚ್ಚಾಗಿರೋದು ಶುಭ ಸೂಚನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅನ್ನೋ ಸೂಚನೆ ಇರೋದರಿಂದ ಅವರು ಬರ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೊರಟಗೆರೆಯಲ್ಲಿಂದು ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಂಥ ಹಿರಿಯ ನಾಯಕರು ಬಂದಿರೋದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅನ್ನೋ ಮುನ್ಸೂಚನೆ ನೀಡುತ್ತಿದೆ. ಇನ್ನೂ ಕೂಡ ಬಹಳಷ್ಟು ಜನರು ಕಾಂಗ್ರೆಸ್‌ಗೆ ಬರುವವರಿದ್ದಾರೆ ಎಂದರು.
ರಾಮದಾಸ್ ಕೂಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದರೆ ಆಶ್ಚರ್ಯಪಡಬೇಕಿಲ್ಲ. ತುಮಕೂರು ಜಿಲ್ಲೆಯ ಬೇರೆ ಬೇರೆ ಪಕ್ಷದ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಕೂಡಾ ಕೊರಟಗೆರೆ ಕ್ಷೇತ್ರದ ಪ್ರಚಾರಕ್ಕೆ ಬರ್ತಾರೆ ಎಂದು ಮಾಹಿತಿ ನೀಡಿದರು.
ಬಂದವರನ್ನು ಸಮಾನ ರೀತಿಯಲ್ಲಿ ನೋಡ್ತೀವಿ: ಎಲ್ಲರನ್ನೂ ಸರಿಸಮನಾಗಿ ಕಾಣುತ್ತೇವೆ. ಅವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳವುದು ಎಂದರು. ಈಗಾಗಲೇ ಕೆಲವರು ಬಂದಿದ್ದಾರೆ, ಇನ್ನೂ ಬರುವವರಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಹೀಗೆಯೇ ಇರಬೇಕು ಎಂದು ರೂಲ್ಸ್ ಮಾಡಿಕೊಳ್ಳುವುದು ಕಷ್ಟ ಎಂದು ತಿಳಿಸಿದರು. ದಲಿತ ಸಿಎಂ ಕುರಿತು ನಾನು ಪ್ರತಿಕ್ರಿಯೆ ನೀಡಲು ಹೋಗಲ್ಲ. ನಮಗೆ ಬೇಕಾಗಿರೋದು ಕಾಂಗ್ರೆಸ್ ಅಧಿಕಾರಕ್ಕೆ ಬರೋದು. ಅದರ ಬಗ್ಗೆ ಟಿಪ್ಪಣಿ ಮಾಡೋದು ನನಗೆ ಇಷ್ಟವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಳುಗುವ ಹಡಗು ಎಂಬ ಸಿಎಂ ಹೇಳಿಕೆ: ಅವರೇ ಹೇಳಿದ ಹಾಗೆ ಯಾರು ಮುಳುಗುತ್ತಾರೆ ಅನ್ನೋದು 13ನೇ ತಾರೀಖು ಗೊತ್ತಾಗುತ್ತೆ ಎಂದರು.
ಕಲ್ಲು ತೂರಾಟ: ಜಿ.ಪರಮೇಶ್ವರ್ ಅವರಿಂದು ಕೊರಟಗೆರೆಯಲ್ಲಿ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿ ಒಳಭಾಗ ಹೋಗುತ್ತಿದ್ದ ವೇಳೆ ನೆರೆದಿದ್ದ ಜನರ ಗುಂಪಿನಿಂದ ಕಲ್ಲು ತೂರಿ ಬಂದು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಗಾಯಗೊಂಡರು. ಕಾನ್ಸ್‌ಟೇಬಲ್ ಸ್ಥಳದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಆಕೆಯನ್ನು ಪೊಲೀಸ್ ಜೀಪಿನಲ್ಲಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಪರಮೇಶ್ವರ್ ತಾಲೂಕು ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಗೇಟ್ ಒಳಭಾಗಕ್ಕೆ ಪರಮೇಶ್ವರ್ ತೆರಳಿದ ಬಳಿಕ ಕಲ್ಲೆಸೆತ ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿದ್ದ ಜನರ ಮಧ್ಯೆ ಯಾರು ಕಲ್ಲು ಎಸೆದಿದ್ದಾರೆ ಎಂದು ಗೊತ್ತಾಗಿಲ್ಲ.
ಇದನ್ನೂಓದಿ:ಹು-ಧಾ ಸೆಂಟ್ರಲ್ ಕ್ಷೇತ್ರ: ಕಾಂಗ್ರೆಸ್ನಿಂದ ಶೆಟ್ಟರ್ - ಬಿಜೆಪಿಯಿಂದ ಮಹೇಶ ಟೆಂಗಿನಕಾಯಿ ನಾಮಪತ್ರ ಸಲ್ಲಿಕೆ