ತುಮಕೂರು : ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಗ್ರಾಮದ ಬಳಿ ಖಾಸಗಿ ಬಸ್ ನೆಲಕ್ಕುರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ 5 ಮಂದಿ ಸಾವನ್ನಪ್ಪಿದ್ದು, ಅಪಘಾತದ ಬಗ್ಗೆ ಪಾವಗಡ ಶಾಸಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ಅಮೂಲ್ಯ18, ಅಜಿತ್ 16, ಶಹನವಾಜ್ 18, ಕಲ್ಯಾಣ್ 18, ಸೂಲನಾಯಕನಹಳ್ಳಿ ಅಜಿತ್ 17 ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 25 ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ: ಪಾವಗಡದ ಬಳಿ ಖಾಸಗಿ ಬಸ್ ಪಲ್ಟಿ: 8ಕ್ಕೂ ಹೆಚ್ಚು ಮಂದಿ ಸಾವು, ಹಲವರಿಗೆ ಗಾಯ
ಈ ಬಗ್ಗೆ ಮಾತನಾಡಿದ ಶಾಸಕ ವೆಂಕಟರಮಣಪ್ಪ, ವೈಎನ್ ಹೊಸಕೋಟೆಯಿಂದ ಪಾವಗಡ ಪಟ್ಟಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಬಸ್ ಪಲ್ಟಿಯಾಗಿ ಅನೇಕ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹಲವಾರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದರು.
ಪ್ರಯಾಣಿಕರಿಗೆ ಹೆಚ್ಚಿನ ಪ್ರಾಣಾಪಾಯವೇನಿಲ್ಲ. ರಾಜ್ಯ ಸರ್ಕಾರದಿಂದ ಮೃತಪಟ್ಟವರಿಗೆ ಪರಿಹಾರ ದೊರಕುವ ವಿಚಾರದ ಬಗ್ಗೆ ಸಿಎಂ ಬಳಿ ಮಾತನಾಡುತ್ತೇವೆ. ಈಗ ಗ್ರಾಮೀಣ ಪ್ರದೇಶದಲ್ಲಿ ಬಸ್ಗಳ ಕೊರತೆಯಿಲ್ಲ. ಸಾಕಷ್ಟು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅದೇ ಮಾರ್ಗದಲ್ಲಿ ಬರಬೇಕಾದರೆ ಎರಡು ಬಸ್ಗಳ ನಡುವೆ ಅಪಘಾತವಾಗಿತ್ತು. ಹೀಗಾಗಿ ಎರಡು ಬಸ್ಗಳ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಎರಡು ಬಸ್ಗಳು ಇಲ್ಲದೇ ಇರುವುದರಿಂದ ಈ ಬಸ್ಗೆ ಸ್ವಲ್ಪ ಪ್ರಯಾಣಿಕರು ಜಾಸ್ತಿಯಾಗಿದೆ ಎಂದರು.
ಓದಿ: ಇದ್ದಕ್ಕಿದ್ದಂತೆ ಗೂಗಲ್ ಮ್ಯಾಪ್ ಕಾರ್ಯ ಸ್ಥಗಿತ.. ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಸವಾರರು!
ಟಿಕೆಟ್ ದರ ಕಡಿಮೆ ಇರುವುದರಿಂದ ಜನ ಸಹಜವಾಗಿ ಖಾಸಗಿ ಬಸ್ಗೆ ಜನ ತೆರಳುತ್ತಿದ್ದಾರೆ ಹೊರತು ಸರ್ಕಾರಿ ಬಸ್ಗೆ ಜನ ಹತ್ತೊದಿಲ್ಲ. ಸರ್ಕಾರಿ ಬಸ್ಗಳ ಸೌಲಭ್ಯ ಸಾಕಷ್ಟಿದ್ದರೂ ಜನ ಪ್ರಯಾಣಿಸುವುದು ಕಡಿಮೆಯಾಗ್ತಿದೆ. ಇದು ತಮಗೆಲ್ಲ ಗೊತ್ತಿರುವ ವಿಚಾರನೇ ತಾನೇ ಎಂದು ಶಾಸಕ ವೆಂಕಟರಮಣಪ್ಪ ಹೇಳಿ ಮುಂದೆ ತೆರಳಿದರು.
ಇನ್ನು ಬಸ್ ಪಲ್ಟಿಯಾದ ಸ್ಥಳದಲ್ಲಿ ಅನೇಕ ಪ್ರಯಾಣಿಕರು ರಕ್ತದ ಮಡುವಿನಲ್ಲಿ ಬಿದ್ದು ಚಿರಾಡುತ್ತಿರುವ ದೃಶ್ಯಗಳು ಸರ್ವೇಸಾಮಾನ್ಯವಾಗಿವೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.