ತುಮಕೂರು: ಬೆಂಗಳೂರಿನಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಒಗ್ಗಟ್ಟು ಪ್ರದರ್ಶನಕ್ಕೆ ಸಮಾವೇಶ ನಡೆಸುವ ಕುರಿತು ಚರ್ಚಿಸಲು ಇಲ್ಲಿ ನಡೆದ ಸಭೆಯಲ್ಲಿ ಸಣ್ಣಪುಟ್ಟ ಗೊಂದಲಗಳೊಂದಿಗೆ ವೇದಿಕೆ ಸಜ್ಜುಗೊಂಡಿದೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ತುಮಕೂರಿನಲ್ಲಿದೆ. ಆಂತರಿಕ ಸಭೆಯಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮತ್ತು ಕೆಲವರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ...ಮೀಸಲಾತಿಯೊಂದಿಗೆ ವಾಪಸ್ ಬರುತ್ತೇನೆ ಎಂದು ಮಾತು ನೀಡಿದ್ದೇನೆ: ಜಯಮೃತ್ಯುಂಜಯ ಸ್ವಾಮೀಜಿ
ಸಭೆಯ ನಂತರ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ರಾಜ್ಯ ಸರ್ಕಾರದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡುವುದಾಗಿ ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ ಎಂದರು.
ಫೆ.18ರಂದು ಪಾದಯಾತ್ರೆ ಬೆಂಗಳೂರು ತಲುಪಲಿದ್ದು, ಫೆ.21ರಂದು ನೈಸ್ ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶ ಪೂರ್ಣಗೊಳ್ಳುವುದರೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೀಸಲಾತಿ ಆದೇಶ ಹೊರಡಿಸಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿಯೇ ನಿತ್ಯವೂ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದರು.
ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಎರಡೂ ಪೀಠದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆದಿದೆ. ಫೆ.21ರಂದು ಬೆಂಗಳೂರಿನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.