ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಅಂಗಡಿ ಮಾಲೀಕನ ಖಾತೆಗೆ ಜಮಾ ಆಗಬೇಕಿದ್ದ ಹಣವನ್ನು, ತನ್ನ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡು ವ್ಯವಸ್ಥಿತವಾಗಿ ವಂಚಿಸುತ್ತಿದ್ದ ಅಂಗಡಿ ಕೆಲಸಗಾರನ ಕರಾಮತ್ತು ಬೆಳಕಿಗೆ ಬಂದಿದೆ.
ಸಾದತ್ ರಿಜ್ವಾನ್ ಎಂಬಾತನೇ ಆರೋಪಿಯಾಗಿದ್ದು, ಕುಣಿಗಲ್ ತಾಲೂಕಿನ ಮೇಗನಹಳ್ಳಿ ಬಳಿ ಜಿಯಾವುಲ್ಲಾ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅಂಗಡಿ ಮಾಲೀಕನಿಗೆ ಸ್ವಲ್ಪವೂ ಸುಳಿವು ನೀಡದಂತೆ ಸುಮಾರು 14 ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.
ಇದನ್ನೂ ಓದಿ: ಜಗಳ ಬಿಡಿಸಲು ಹೋಗಿ ವಿನಾಕಾರಣ ಪ್ರಾಣ ಕಳೆದುಕೊಂಡ ವೃದ್ಧೆ; ಕುಷ್ಟಗಿಯಲ್ಲಿ ಇಬ್ಬರು ಅರೆಸ್ಟ್
ಸಾದತ್ ರಿಜ್ವಾನ್ ಸಂಪೂರ್ಣವಾಗಿ ಡ್ರೈಫ್ರೂಟ್ಸ್ ಅಂಗಡಿಯಲ್ಲಿನ ಎಲ್ಲಾ ರೀತಿಯ ಹಣಕಾಸು ವ್ಯವಹಾರವನ್ನು ನಿಭಾಯಿಸುತ್ತಿದ್ದನು. ಮಾಲೀಕನಿಗೆ ಸುಳಿವು ದೊರೆಯದಂತೆ ಫೋನ್ ಪೇ, ಗೂಗಲ್ ಪೇ ಕ್ಯೂಆರ್ ಕೋಡ್ಗಳನ್ನು ಬದಲಿಸಿ, ಗ್ರಾಹಕರು ಪಾವತಿಸುತ್ತಿದ್ದ ಹಣವನ್ನು ತನ್ನ ಸ್ವಂತ ಖಾತೆಗೆ ಕಳೆದ ಮೂರು ತಿಂಗಳಿನಿಂದ ವರ್ಗಾವಣೆ ಮಾಡಿಕೊಂಡಿದ್ದಾನೆ.
ಅಲ್ಲದೆ ಅಂಗಡಿಯಲ್ಲಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕೂಡ ಕಳವು ಮಾಡಿಕೊಂಡು ಆರೋಪಿ ಪರಾರಿಯಾಗಿದ್ದಾನೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಅಂಗಡಿ ಮಾಲೀಕ ಸಾದತ್ ವಿರುದ್ಧ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲು ತಂಡವನ್ನು ರಚಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ