ತುಮಕೂರು: ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ನಡೆದಿದೆ. ನಾಮಕರಣ ಕಾರ್ಯಕ್ರಮ ಗ್ರಾಮದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಹೆಜ್ಜೇನು ದಿಢೀರ್ ದಾಳಿ ಮಾಡಿವೆ. 47 ವರ್ಷದ ವೀರಭದ್ರಯ್ಯ ಎಂಬುವರು ಹೆಜ್ಜೇನು ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೆಜ್ಜೇನು ದಾಳಿಗೊಳಗಾದವರಿಗೆ ಗುಬ್ಬಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಮೀಪದ ಮರದಿಂದ ಹೆಜ್ಜೇನು ಎದ್ದಿವೆ. ಇದನ್ನು ಗಮನಿಸಿದ ಜನರು ದೇವಸ್ಥಾನದ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದರು. ಸುಮಾರು ಒಂದು ಗಂಟೆ ಕಳೆದ ನಂತರ ಹೊರಗೆ ಬಂದ ಜನರ ಮೇಲೆ ಜೇನುನೊಣಗಳು ದಾಳಿ ಮಾಡಿವೆ. ಇದರಿಂದಾಗಿ ಜನರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಜ್ಜೇನು ದಾಳಿಗೆ ವ್ಯಕ್ತಿ ಸಾವು: ಇತ್ತೀಚಿಗೆ, ಶವಸಂಸ್ಕಾರಕ್ಕೆ ತೆರಳಿದ್ದ ವೇಳೆ ಸ್ಮಶಾನದ ಮರವೊಂದರಲ್ಲಿ ಗೂಡು ಕಟ್ಟಿದ್ದ ಹೆಜ್ಜೇನು ದಾಳಿ ನಡೆಸಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಕೊಂಗರಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಚೆನ್ನಪ್ಪ (60) ಸಾವಿಗೀಡಾದ್ದರು. ಹೆಜ್ಜೇನು ದಾಳಿಗೆ 14 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಲ್ಲಕ್ಕಿ ಎಸ್ಟೇಟ್ನಲ್ಲಿ ಕೂಲಿ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದರಿಂದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಘಟನೆ ಇತ್ತೀಚಿಗೆ ನಡೆದಿತ್ತು. ವಿನೋದ, ಪುಷ್ಪ, ಪ್ರೇಮ ಎಂಬುವವರು ಗಾಯ ಗೊಂಡಿದ್ದರು. ಗಾಯಾಳುಗಳನ್ನು ಬಣಕಲ್ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೋಟಗಳಲ್ಲಿ ಜೇನುಗಳು ಗೂಡು ಕಟ್ಟಿ ಕೊಂಡಿದ್ದು, ರಸ್ತೆಯಲ್ಲಿ ಓಡಾಡುವವರ ಮೇಲೆ ಹಾಗೂ ಕೂಲಿ ಕೆಲಸ ಮಾಡುವವರ ಮೇಲೆ ದಾಳಿ ಮಾಡುತ್ತಿವೆ. ಇದರಿಂದಾಗಿ ಯುವಕರು, ಯುವತಿಯರು ಸೇರಿದಂತೆ ಗ್ರಾಮದ ಹಲವರು ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ ಉದಾಹರಣೆ ಸಾಕಷ್ಟು ನಡೆದಿವೆ. ಜೇನು ಹುಳುಗಳ ಹಠಾತ್ ದಾಳಿಗೆ ಆತಂಕಗೊಂಡಿರುವ ಗ್ರಾಮಸ್ಥರು ದಾಳಿ ನಡೆದ ರಸ್ತೆಯಲ್ಲಿ ಓಡಾಡುವುದಕ್ಕೆ ಭಯ ಪಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದರು.
ಇದನ್ನೂ ಓದಿ: ಪ್ರತಿಭಟನೆ ವೇಳೆ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರ ಮೇಲೆ ಹೆಜ್ಜೇನು ದಾಳಿ