ತುಮಕೂರು: ಕೆಟ್ಟ ಚಟಗಳಿಗೆ ದಾಸರಾಗುವವರು ಯಾರೂ ಉದ್ಧಾರವಾಗುವುದಿಲ್ಲ, ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ, ತಪ್ಪು ಮಾಡಬಾರದು ಎಂಬ ಭಾವನೆ ಬಂದರೆ ಖಂಡಿತ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ವ್ಯಸನಮುಕ್ತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷದ 365 ದಿನಗಳಲ್ಲಿ ಶ್ರೇಷ್ಠ ದಿನ ಎಂದರೆ ಗಾಂಧಿ ಜಯಂತಿ. ಆತ್ಮವನ್ನು ವಿಮರ್ಶೆ ಮಾಡಿಕೊಂಡು ಪ್ರತಿಯೊಬ್ಬರು ಜೀವನ ನಡೆಸಬೇಕು, ನಮ್ಮನ್ನು ಯಾರು ಉದ್ಧಾರ ಮಾಡುವುದಿಲ್ಲ ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳಬೇಕು ತಪ್ಪು ಅರಿಯದೇ ಮಾಡುವುದು ಸಹಜ, ಅರಿತು ಮಾಡುವುದು ಅಕ್ಷಮ್ಯ ಅಪರಾಧ. ನಾವು ಮಾಡುವ ಹೀನ ಕೃತ್ಯದಿಂದ ಇಡೀ ಸಮಾಜ ದೂಷಿಸುವ ಹಾಗೂ ಕಡೆಗಣಿಸುವಂತಾಗುತ್ತದೆ, ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ ತಪ್ಪು ಮಾಡಬಾರದು ಎಂಬ ಭಾವನೆ ಮನಸ್ಸಿನಲ್ಲಿ ಬಂದರೆ ಖಂಡಿತ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್ ಹಾಲ್ ವೃತ್ತದಿಂದ ಕುಂಚಿಟಿಗ ಸಮುದಾಯವರೆಗೂ ಜಾಥಾ ಹಮ್ಮಿಕೊಳ್ಳಲಾಗಿತ್ತು.