ತುಮಕೂರು: ಪವರ್ ಗ್ರಿಡ್ ಸಂಸ್ಥೆ, ಕೂಡ್ಗಿ ಸಂಸ್ಥೆ ಕೆಪಿಟಿಸಿಎಲ್ ನಿಂದ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಿ, ಪ್ರತಿಭಟಿಸಲಾಗುವುದು ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್ ಸುಧೀಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬೆಳ್ಳಾವಿ, ಕೋರಾ ಹೋಬಳಿ, ಶಿರಾ ತಾಲೂಕಿನ ಕಳ್ಳಂಬೆಳ್ಳ ಕಸಬಾ, ಹುಲಿಕುಂಟೆ, ಮಧುಗಿರಿ ಇನ್ನೂ ಹಲವು ಪ್ರದೇಶಗಳಲ್ಲಿ ರೈತರ ಜಮೀನುಗಳ ಮೇಲೆ ಹೈಟೆನ್ಷನ್ ವಿದ್ಯುತ್ ಕಂಬಗಳು ಮತ್ತು ತಂತಿ ಅಳವಡಿಸಲಾಗಿದೆ. ಇದಕ್ಕೆ ರೈತರಿಗೆ ಸರಿಯಾದ ಪರಿಹಾರ ನೀಡದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗಿದೆ ಎಂದು ತಿಳಿಸಿದರು.
ಜೊತೆಗೆ ಅಜ್ಜಗೊಂಡನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಪ್ರದೇಶದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವುದರಿಂದ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಕಳೆದ ವರ್ಷವೇ ಮನವಿ ಮಾಡಲಾಗಿತ್ತು, ಸಾರ್ವಜನಿಕವಾಗಿ ಜಿಲ್ಲಾಧಿಕಾರಿಯವರು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದರು.
ರಾಜ್ಯದ 5 ಜಿಲ್ಲೆಗಳಲ್ಲಿ, 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪವರ್ ಗ್ರಿಡ್ ಸಂಸ್ಥೆ, ಕೊಡ್ಲಿ ಮತ್ತು ಕೆ ಪಿ ಟಿ ಸಿ ಎಲ್ ನಿಂದ ಈ ಕಾಮಗಾರಿ ನಡೆಯುತ್ತಿದೆ. ಆದರೆ ತುಮಕೂರು ಜಿಲ್ಲೆಯ ರೈತರಿಗೆ ಇದರಿಂದ ಹೆಚ್ಚು ಅನ್ಯಾಯವಾಗುದ್ದು, ರೈತರಿಗೆ ತಲುಪಬೇಕಾದ ಹಣ ಸರಿಯಾಗಿ ಲಭಿಸುತ್ತಿಲ್ಲ. ಇದು 2ಜಿ ಸ್ಪೆಕ್ಟ್ರಂ ಹಗರಣಕ್ಕಿಂತ ದೊಡ್ಡ ಹಗರಣವಾಗಿದೆ ಎಂದು ಆರೋಪಿಸಿದರು.
ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಂದು ಮತದಾನದ ಕೇಂದ್ರದ ನೂರು ಮೀಟರ್ ದೂರದಲ್ಲಿ ಅನ್ಯಾಯಕ್ಕೊಳಗಾದ ಜಿಲ್ಲೆಯ ರೈತರು, ತಮ್ಮ ಗ್ರಾಮಗಳಲ್ಲಿ ಸಾಮೂಹಿಕವಾಗಿ ಕುಟುಂಬ ಸಮೇತ ಮತದಾನ ಬಹಿಷ್ಕರಿಸಿ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದರು.