ತುಮಕೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಹಿನ್ನೆಲೆ ಶಾಲಾ - ಕಾಲೇಜ್ಗಳು ಬಂದ್ ಮಾಡುವ ಆಲೋಚನೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತಿಪಟೂರಿನ ಕಲ್ಪತರು ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ, ಒಂದು ವಾರ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು. ಸೋಂಕು ಏರಿಕೆಯಾದರೆ ಕಠಿಣ ನಿಯಮದ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಒಳಾಂಗಣ ಕಾರ್ಯಕ್ರಮಗಳಿಗೆ ಷರತ್ತು ಹಾಕಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧವಿಲ್ಲ. ನಿಯಮ ಪಾಲಿಸಿ ಕಾರ್ಯಕ್ರಮ ಮಾಡಬಹುದು ಎಂದರು.
ಕೋವಿಡ್ ಹಣ ದುರುಪಯೋಗ ಆರೋಪಕ್ಕೆ ಸದನದಲ್ಲಿ ಈ ಕುರಿತು ಹೇಳಿಕೆ ಕೊಟ್ಟಿದ್ದೇವೆ. ಸಾಕ್ಷ್ಯಾಧಾರವಿಲ್ಲದೇ ಆರೋಪ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯರಿಗೆ ಸಿಎಂ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ತಿಪಟೂರಿನಲ್ಲಿ ರಂಗಾಪುರ ಶ್ರೀ ಗುರು ಪರದೇಶಿಕೇಂದ್ರ ಮಠದ ಸಮುದಾಯ ಭವನವನ್ನು ಉದ್ಘಾಟಿಸಿದರು. ಸಮುದಾಯಭವನದಲ್ಲಿ ಕಲ್ಪಿಸಲಾಗಿರುವ ಮೂಲ ಸೌಲಭ್ಯವನ್ನು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗವಹಿಸಿದ್ದರು. ಈ ವೇಳೆ, ಶಾಸಕರಾದ ಮಸಾಲೆ ಜಯರಾಮ್, ಬಿ.ಸಿ ನಾಗೇಶ್ ಹಾಗೂ ತುಮಕೂರು ಸಂಸದ ಬಸವರಾಜ್ ಸಿಎಂಗೆ ಸಾಥ್ ನೀಡಿದರು.