ತುಮಕೂರು: ಕೊರೊನಾ ಸೋಂಕು ಬಿಕ್ಕಟ್ಟಿನ ನಡುವೆ ನಗರ ಪ್ರದೇಶಗಳಲ್ಲಿ ಕೆಲಸ ಕಳೆದುಕೊಂಡು ಅನೇಕ ಮಂದಿ ತಮ್ಮ ಸ್ವಗ್ರಾಮಗಳಿಗೆ ಆಗಮಿಸಿದ್ದರು. ಕೈಗೆ ಕೆಲಸವಿಲ್ಲದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಇದೀಗ ತುಮಕೂರು ಜಿಲ್ಲೆಯಲ್ಲಿ ವರದಾನವಾಗಿ ಪರಿಣಮಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ ಹೇಳಿದ್ದಾರೆ.
ಏಪ್ರಿಲ್ನಿಂದ ಜುಲೈ ವರೆಗೆ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿ ಸಾಧಿಸಲಾಗಿದೆ. ಈ ಸಂದರ್ಭದಲ್ಲಿ ಅನೇಕ ಮಂದಿ ಗ್ರಾಮೀಣ ಪ್ರದೇಶದಿಂದ ವಲಸೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದ ಹಿನ್ನೆಲೆಯಲ್ಲಿ ಯೋಜನೆಯಡಿ ಕೆಲಸ ನೀಡಲಾಗಿದೆ. ಈ ವೇಳೆ 30,000 ಜಾಬ್ ಕಾರ್ಡ್ ಅನ್ನು ಕೂಡ ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 200 ತಂಡಗಳಿಗೆ ಭೇಟಿ ನೀಡಲಾಗಿದೆ. ಅಲ್ಲದೆ ಅಲ್ಲಿನ ಪ್ರತಿಯೊಬ್ಬರು ಮನೆಗಳಿಗೂ ತೆರಳಿ ಜಾಬ್ ಕಾರ್ಡ್ ಹೊಂದಿರುವ ಕುರಿತು ಮಾಹಿತಿ ಪಡೆಯಲಾಗಿದೆ. ಅಲ್ಲದೆ ಪ್ರತಿಯೊಬ್ಬರಿಗೂ ಜಾಬ್ ಕಾರ್ಡ್ ವಿತರಿಸುವ ಆಂದೋಲನವನ್ನು ಕೂಡ ನಡೆಸಲಾಗಿದೆ. ನರೇಗಾ ಯೋಜನೆಯಡಿ ಅವರವರ ಜಮೀನುಗಳಲ್ಲಿ ಬದು ಕೆಲಸವನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಅಂತಹವರಿಗೆ ಸುಮಾರು 120 ಕೋಟಿ ರೂ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯೋಜನೆಯಡಿ 10 ಸಾವಿರ ಬದು ನಿರ್ಮಾಣ ಕಾಮಗಾರಿ ಗಳು ನಡೆದಿವೆ. ಇದಲ್ಲದೆ ಕೃಷಿ ಹೊಂಡಗಳನ್ನು ಕೂಡ ಯೋಜನೆಯಡಿ ಮಾಡಲಾಗಿದೆ. ಈ ಮೂಲಕ ಇತ್ತೀಚಿಗೆ ಮಳೆಸುರಿದ ಹಿನ್ನೆಲೆಯಲ್ಲಿ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿ ರೈತರಿಗೆ ಸಾಕಷ್ಟು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.