ತುಮಕೂರು: ನಗರದ ಬಟವಾಡಿ ರಸ್ತೆಯಿಂದ ಗುಬ್ಬಿ ಗೇಟ್ ರಸ್ತೆವರೆಗಿನ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಿದ್ಧಗಂಗಾ ಕ್ಷೇತ್ರದ ಪದ್ಮಭೂಷಣ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ತ್ರಿವಿಧ ದಾಸೋಹಿ ಶ್ರೀಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ಹೆದ್ದಾರಿಗೆ ಅವರ ಹೆಸರು ನಾಮಕರಣ ಮಾಡಲಾಯಿತು.
ನಾಳೆ ಶ್ರೀಗಳ 115ನೇ ಜಯಂತ್ಯುತ್ಸವ ಕಾರ್ಯಕ್ರಮ ಜರುಗಲಿದೆ. ಅದರ ಮುನ್ನಾ ದಿನವಾದ ಇಂದು ಬೆಳಗ್ಗೆ ತುಮಕೂರು ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಬಟವಾಡಿ ಎಪಿಎಂಸಿ ಹಾಗೂ ಗುಬ್ಬಿ ಗೇಟ್ವರಗೆ ಶ್ರೀಗಳ ಹೆಸರನ್ನು ತುಮಕೂರು ಮಹಾನಗರ ಪಾಲಿಕೆಯಿಂದ ಇಡಲಾಯಿತು. ಬಟವಾಡಿ ವೃತ್ತದಲ್ಲಿ ನಾಮಫಲಕವನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.
ಈ ವೇಳೆ ತುಮಕೂರು ಸಂಸದ ಜಿ ಎಸ್ ಬಸವರಾಜು, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಮಹಾನಗರ ಪಾಲಿಕೆ ಆಯುಕ್ತ ರೇಣುಕಾ ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.