ತುಮಕೂರು : ನಿನ್ನೆ ನಡೆದ ಸಿಎಲ್ಪಿ ಸಭೆಯಲ್ಲಿ ಶಾಸಕರು ಯಾವುದೇ ಅಸಮಾಧಾನ ಹೊರಹಾಕಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವು ಶಾಸಕರು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳಿಕೊಂಡಿದ್ರು. ಹಿಂದಿನ ಶಾಸಕಾಂಗ ಪಕ್ಷದ ಸಭೆ ಅರ್ಧದಲ್ಲೇ ನಿಂತಿತ್ತು. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ನಿಂತಿತ್ತು. ಹಾಗಾಗಿ ಶಾಸಕರು ಪತ್ರ ಬರೆದಿದ್ದರು. ಪತ್ರ ಬರೆಯೋದು ಅಷ್ಟೊಂದು ಸೂಕ್ತ ಅಲ್ಲ ಎಂದು ಸಿಎಂ ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಫೇಕ್ ಅಕೌಂಟ್ ಕೊಟ್ಟರೆ ಅದನ್ನು ನಿಲ್ಲಿಸುತ್ತೇವೆ: ಅದಾದ ಮೇಲೆ ಅವರ ಶಾಸಕರ ಸಮಸ್ಯೆಗಳು ಚರ್ಚೆಯಾದವು. ಸಚಿವರುಗಳು ಇನ್ನೂ ಹೆಚ್ಚಿನದಾಗಿ ಶಾಸಕರಿಗೆ ಸ್ಪಂದಿಸಬೇಕು ಎಂದು ಪ್ರಸ್ತಾಪ ಮಾಡಿದ್ರು ಎಂದರು. ಪ್ರತಿ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರ ಸಭೆಯನ್ನು ಪ್ರತ್ಯೇಕವಾಗಿ ಕರೆಯುವ ಭರವಸೆಯನ್ನು ಸಿಎಂ ಕೊಟ್ಟಿದ್ದಾರೆ. ಸಿಎಲ್ಪಿ ಸಭೆಯಲ್ಲಿ ಬಿ ಆರ್ ಪಾಟೀಲ್ ರಾಜೀನಾಮೆ ಕೊಡುತ್ತೇನೆ ಎಂದಿದ್ದ ವಿಚಾರ ಸುಳ್ಳು. ಅನ್ನಭಾಗ್ಯ ದುಡ್ಡು ಫಲಾನುಭವಿಗಳ ಖಾತೆ ಬಿಟ್ಟು ಬೇರೆ ಖಾತೆಗೆ ಜಮಾ ಆಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾವು ಪರಿಶೀಲನೆ ಮಾಡುತ್ತೇವೆ. ಆರಂಭದಲ್ಲಿ ಕೆಲವು ಗೊಂದಲಗಳು ನಡೆಯುತ್ತವೆ. ಫೇಕ್ ಅಕೌಂಟ್ ಕೊಟ್ಟರೆ ಅದನ್ನು ನಿಲ್ಲಿಸುತ್ತೇವೆ ಎಂದರು.
ಇದನ್ನೂ ಓದಿ: ಗಣಿ ಗುತ್ತಿಗೆ ಸಮಸ್ಯೆ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲು ಸಿಎಂ ಸೂಚನೆ
ಇವರು ಬೇರೆ ಬೇರೆ ಅರ್ಥ ಕಲ್ಪಿಸೋದು ಸರಿಯಲ್ಲ: ಉಡುಪಿ ಖಾಸಗಿ ಕಾಲೇಜಿನ ಶೌಚಾಲಯ ವಿಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಹೇಳಿಕೆಯನ್ನೇ ಬಿಜೆಪಿಯವರು ಪ್ರಚಾರಕ್ಕೆ ಬಳಸಿದರೆ ಬಳಸಿಕೊಳ್ಳಲಿ. ನಮಗೆ ಜವಾಬ್ದಾರಿ ಇದೆ. ಸರ್ಕಾರ ನಡೆಸುವ ನಾವು ಇಂತಹ ಘಟನೆಯನ್ನು ಲಘುವಾಗಿ ಸ್ವೀಕರಿಸೋದಿಲ್ಲ. ಆದರೆ, ಇವರು ಬೇರೆ ಬೇರೆ ಅರ್ಥ ಕಲ್ಪಿಸೋದು ಸರಿಯಲ್ಲ. ಅವರು ಹೇಳಿದ್ದಕ್ಕೆ, ವ್ಯಾಖ್ಯಾನಕ್ಕೆ ಉತ್ತರ ಕೊಡಲು ಆಗಲ್ಲ ಎಂದು ತಿಳಿಸಿದರು.
ಸರ್ಕಾರ ಅಸ್ಥಿರ ಮಾಡೋಕೆ ಯಾರಿಂದಲೂ ಆಗಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ವಿದೇಶ ಪ್ರವಾಸ ವಿಚಾರವಾಗಿ ಮಾತನಾಡಿ, ಯಾರು ಹೇಗೆ? ಎಲ್ಲಿ ಹೊರದೇಶಕ್ಕೆ ಹೋಗ್ತಾರೆ? ಅನ್ನೋದು ನಮಗೆ ಗೊತ್ತಿಲ್ಲ. ಸರ್ಕಾರ ಅಸ್ಥಿರ ಮಾಡೋಕೆ ಯಾರಿಂದಲೂ ಆಗಲ್ಲ. ನಾವು ಸುಭದ್ರವಾಗಿದ್ದೇವೆ ಎಂದು ಅವರು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ನಾಳೆ ಶಾಸಕಾಂಗ ಪಕ್ಷದ ಸಭೆ.. ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಶಾಸಕರಿಂದ ಪ್ರಶ್ನೆಗಳ ಸುರಿಮಳೆ ಸಾಧ್ಯತೆ!