ತುಮಕೂರು : ಲಾಕ್ಡೌನ್ ನಿಯಮ ಉಲ್ಲಂಘಿಸಿ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದ ಮೂವರ ಮೇಲೆ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಡಗೂರು ಗ್ರಾಮದ ರವಿ, ರಾಜೇನಹಳ್ಳಿಯ ವಸಂತ್ ಕುಮಾರ್, ಹೊನ್ನೇಗೌಡ ಎಂಬ ಮೂವರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಇಡಗೂರು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ರು. ಆದರೆ ಯಾರೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ ಎಂಬುದು ಗಮನಾರ್ಹವಾಗಿದೆ.
ಇನ್ನು ಶಾಸಕರು ಸಾಮಾಜಿಕ ಅಂತರ ಮರೆತು, ಮಾಸ್ಕ್ ಸಹ ಹಾಕಿಕೊಳ್ಳದೇ ಬೇಜವಾಬ್ದಾರಿತನ ಮೆರೆದಿದ್ದಾರೆ. ಸರ್ಕಾರದ ಶಾಸಕರಾಗಿರುವ ಇವರು ಸರ್ಕಾರದ ಆದೇಶ ಉಲ್ಲಂಘಿಸಿದ್ದಲ್ಲದೇ ಜನ್ಮದಿನದ ನಿಮಿತ್ತ ಬಿರಿಯಾನಿ ಊಟ ಹಾಕಿಸಿದ್ದರು ಎಂಬುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಶಾಸಕರ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ. ಇದಕ್ಕೂ ಮುನ್ನ ಅವರು ಕೊರೊನಾ ಜಾಗೃತಿ ಕಾರ್ಯಕ್ರಮವನ್ನ ಮಾಡಿದ್ದರು ಎನ್ನಲಾಗಿದೆ.