ತುಮಕೂರು : ಸಾಮಾಜಿಕ ಕಳಕಳಿಯ ಸೇವಾ ಕಾರ್ಯ ಹಾಗೂ ಎಲ್ಲರ ಸಹಕಾರದಿಂದ ಸಂಭಾವ್ಯ ಕೋವಿಡ್ 3ನೇ ಅಲೆ ತಡೆಯಲು ಸಾಧ್ಯ. ಎಲ್ಲರಿಗೂ ಸೇವೆ ಮಾಡುವ ಅವಕಾಶ ಸಿಗಲ್ಲ. ಅಂತಹ ಸೇವಾ ಭಾಗ್ಯದ ಅವಕಾಶವನ್ನು ದೇವರು ನಮಗೆ ಕೊಟ್ಟಿದ್ದಾನೆ. ಅಹಂ ತ್ಯಜಿಸಿ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸಿ ಜಿಲ್ಲೆಯ ಋಣ ತೀರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವೈದ್ಯರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಭಾವ್ಯ ಕೋವಿಡ್ 3ನೇ ಅಲೆಯ ನಿಯಂತ್ರಣಕ್ಕೆ ಪೂರ್ವ ಸಿದ್ಧತೆ ಕುರಿತು ಮಕ್ಕಳ ತಜ್ಞ ವೈದ್ಯರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಒಬ್ಬರಿಂದ ಕೋವಿಡ್ ನಿರ್ವಹಣೆ ಅಸಾಧ್ಯ. ಎಲ್ಲರೂ ಒಗ್ಗಟ್ಟಾಗಿ ನಿಂತರೆ ಕೋವಿಡ್ ಮೂರನೇ ಅಲೆಯನ್ನು ಗೆಲ್ಲಬಹುದು. ಅದಕ್ಕೆ ನಾವೆಲ್ಲರೂ ಸಜ್ಜಾಗಬೇಕು. ನಮ್ಮ ಕೈಲಾದ ಸೇವೆಯನ್ನು ಜನರಿಗೆ ನೀಡಬೇಕು. ನಮ್ಮ ಬದುಕೇ ಮುಖ್ಯವಲ್ಲ. ಸಾಮಾನ್ಯ ಪ್ರಜೆಗಳ ಜೀವವೂ ಮುಖ್ಯ. ಅಂತಹ ಜೀವ ಉಳಿಸುವ ಶಕ್ತಿ ನಮಗೆ ಸಿಕ್ಕಿದೆ. ಅದರ ಅವಕಾಶ ಬಳಕೆಮಾಡಿಕೊಂಡು ಜೀವ ಕಾಪಾಡಲಿಕ್ಕೆ ನಾವೆಲ್ಲ ಹೋರಾಡೋಣ ಎಂದರು.
ಆಮ್ಲಜನಕ, ಹಾಸಿಗೆ ಸೇರಿದಂತೆ ಹಲವು ಸಮಸ್ಯೆಗಳ ನಡುವೆಯೂ ಕೈಮೀರಿ ಹೋಗುತ್ತಿದ್ದ ಕೋವಿಡ್ ಎರಡನೇ ಅಲೆಯನ್ನು ಗೆದ್ದಿದ್ದೇವೆ. ಶೇಕಡಾ 40-45ರಷ್ಟು ಕೋವಿಡ್ ಪಾಸಿಟಿವಿಟಿ ಪ್ರಮಾಣ ಇದ್ದ ಜಿಲ್ಲೆಯನ್ನು ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ನಿಯಂತ್ರಣಕ್ಕೆ ತರಲಾಗಿದೆ. ಪ್ರಸ್ತುತ ಜಿಲ್ಲೆ ಕೋವಿಡ್ ಭೀತಿಯಿಂದ ಹೊರಬಂದಿದೆ. ಅಂತೆಯೇ ನಿರೀಕ್ಷೆಯ ಮೂರನೇ ಅಲೆ ನಿಯಂತ್ರಣಕ್ಕೆ ಶಕ್ತಿ ಮೀರಿ ಕಾರ್ಯ ನಿರ್ವಹಿಸೋಣ ಎಂದು ಹೇಳಿದರು.
ಇದನ್ನೂ ಓದಿ: ಹೆಂಡ್ತಿ ಕೊಲೆ ಮಾಡಿ, ಸೂಟ್ಕೇಸ್ನಲ್ಲಿ ಸಾಗಿಸಿ, ಕೋವಿಡ್ ಕಥೆ ಕಟ್ಟಿದ ಟೆಕ್ಕಿ!
ಮಕ್ಕಳ ತಜ್ಞರಾದ ಡಾ.ಸುಪ್ರಜಾ ಚಂದ್ರಶೇಖರ್ ಮತ್ತು ಡಾ. ಗುರುದತ್, ಅವರು ಸವಿವಿವರವಾಗಿ ವೈದ್ಯರಿಗೆ ಮಕ್ಕಳ ಆರೈಕೆ, ಚಿಕಿತ್ಸೆ ನೀಡುವ ಬಗೆಯನ್ನು ವಿವರಿಸಿದರು. ಬೆಂಗಳೂರು ಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸುಪ್ರಜಾ ಚಂದ್ರಶೇಖರ್ ಮಾತನಾಡಿ, ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡುವ ಕ್ರಮ, ನಂತರದಲ್ಲಿ ಅವರ ಆರೈಕೆ, ಮನೆಯಲ್ಲಿ ಚಿಕಿತ್ಸೆ, ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆಗಳ ವ್ಯವಸ್ಥೆ ಸೇರಿದಂತೆ ಇತರೆ ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡಿದರು.