ತುಮಕೂರು: ರಾಜ್ಯದ ಜನತೆಗೆ ನಾವು ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ. ಸ್ವಾಭಾವಿಕವಾಗಿ ವಿರೋಧ ಪಕ್ಷದವರಿಗೆ ಅದು ಇಷ್ಟ ಇಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ವಿಪಕ್ಷಗಳ ನಾಯಕರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ" ಎಂದರು.
ಟಿ ಬಿ ಜಯಚಂದ್ರ ಅವರಿಗೆ ಬೆದರಿಕೆ ಕರೆ ವಿಚಾರವಾಗಿ ಪ್ರತಿಕ್ರಿಯಿಸುತ್ತ ' ಕರೆ ಮಾಡಿದವರು ಯಾರೆಂದು ಇನ್ನೂ ಗೊತ್ತಾಗಿಲ್ಲ. ಅವರಿಗೆ ಹೆಚ್ಚಿನ ಭದ್ರತೆ ಬೇಕಾ? ಎಂದು ಸ್ವತಃ ನಾನೇ ಕೇಳಿದ್ದೇನೆ. ಬೆದರಿಕೆ ಕರೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಬೆದರಿಕೆ ಕಂಡು ಬಂದರೆ ಹೆಚ್ಚಿನ ಭದ್ರತೆ ಒದಗಿಸುತ್ತೇವೆ ಎಂದರು. ಇನ್ನು ವರ್ಗಾವಣೆ ವಿಚಾರದಲ್ಲಿ ಪೊಲೀಸ್ ಮೆಸ್ನಲ್ಲಿ ಯಾವುದೇ ಗಲಾಟೆ ಆಗಿಲ್ಲ. ಕುಮಾರಸ್ವಾಮಿ ಆರೋಪಕ್ಕೆ ನಾನು ಉತ್ತರ ಕೊಡೋ ಅಗತ್ಯ ಇಲ್ಲ. ರಾಜ್ಯದ ಜನತೆಗೆ ಉತ್ತರ ಕೊಡುತ್ತೇನೆ. ಅವರಿಗೇನು ಉತ್ತರ ಕೊಡಬೇಕು?. ಕುಮಾರಸ್ವಾಮಿ ಅವರು ಪಾಸಿಟಿವ್ ಸಲಹೆ ಕೊಡಲಿ, ಸ್ವೀಕಾರ ಮಾಡುತ್ತೇನೆ ಎಂದರು.
ರಾಹುಲ್ ಗಾಂಧಿ ಅವರ ಅಮಾನತು ವಾಪಸ್ ಪಡೆಯಬೇಕು: ಸಂಸತ್ನಲ್ಲಿ ಸ್ಪೀಕರ್ ಅವರು ರಾಹುಲ್ ಗಾಂಧಿ ಅವರ ಅಮಾನತು ವಾಪಸ್ ಪಡೆಯಬೇಕು. ಕೋರ್ಟ್ ಆದೇಶ ಹೊರಡಿಸಿದ 24 ಗಂಟೆಯಲ್ಲಿ ಅಮಾನತು ಮಾಡಿದರು. ಈಗ ಕೇಸ್ ಸ್ಟೇ ಆಗಿದೆ. ಸ್ಪೀಕರ್ ಅಮಾನತು ವಾಪಸ್ ಪಡೆಯಲಿ ಎಂದು ಗೃಹ ಸಚಿವರು ಆಗ್ರಹಿಸಿದರು. ಸನ್ನಡತೆ ಆಧಾರದ ಮೇಲೆ ಕೈದಿಗಳ ಬಿಡುಗಡೆ ವಿಚಾರವಾಗಿ ಮಾತನಾಡುತ್ತ 'ಸನ್ನಡತೆಯ ಆಧಾರದ ಮೇಲೆ ಸುಮಾರು 78 ಜನ ಕೈದಿಗಳನ್ನು ಬಿಡುಗಡೆ ಮಾಡಲಿದ್ದೇವೆ. ಕ್ಯಾಬಿನೆಟ್ನಲ್ಲಿ ಅನುಮತಿ ಪಡೆದು ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ' ಎಂದು ಸಚಿವ ಪರಮೇಶ್ವರ್ ಇದೇ ವೇಳೆ ತಿಳಿಸಿದರು.
ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದರು. ಇತ್ತೀಚೆಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವರ್ಗಾವಣೆ ಸಂಬಂಧ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದರು. "250 ಮಂದಿ ವರ್ಗಾವಣೆ ಮಾಡಿದ್ದೆವು. ಬಹುತೇಕ ಎಲ್ಲರೂ ರಿಪೋರ್ಟ್ ಮಾಡಿಕೊಂಡಿದ್ದಾರೆ. ತಾಂತ್ರಿಕ ಕಾರಣದಿಂದ ಕೆಲವು ಕಡೆ ಆಗಿಲ್ಲ. ಅದನ್ನು ಸರಿಪಡಿಸಿಕೊಂಡು ಮಾಡ್ತೇವೆ. ಎಲ್ಲವನ್ನೂ ಟೀಕೆ ಮಾಡೋದಲ್ಲ. ಆದಷ್ಟು ಶೀಘ್ರ ಎಲ್ಲ ಸರಿಪಡಿಸಿ ವರ್ಗಾವಣೆ ಮಾಡುತ್ತೇವೆ" ಎಂದು ತಿಳಿಸಿದ್ದರು. ಪೊಲೀಸ್ ಸಭೆಯಲ್ಲಿ ಯತೀಂದ್ರ ಭಾಗಿ ವಿಚಾರವಾಗಿ ಮಾತನಾಡುತ್ತಾ,"ಪಾಸಿಟಿವ್ ಸಲಹೆ ಕೊಡೋದಿದ್ದರೆ ಕೊಡಲಿ. ಎಲ್ಲದರಲ್ಲೂ ಹೆಚ್. ಡಿ ಕುಮಾರಸ್ವಾಮಿ ಆರೋಪ ಮಾಡೋದು ಸರಿಯಲ್ಲ. ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ" ಎಂದು ತಿರುಗೇಟು ನೀಡಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್