ತುಮಕೂರು: ಬಿಜೆಪಿ ಸೇರುವ ಸಂದರ್ಭದಲ್ಲಿ ನಾವು ನಮ್ಮಲ್ಲಿ ಯಾರನ್ನೂ ನಾಯಕರು ಎಂದು ಹೇಳಿರಲಿಲ್ಲ ಬದಲಾಗಿ ಸಮಾನ ಮನಸ್ಕರಾಗಿದ್ದೆವು ಎಂದು ನೂತನ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾವೆಲ್ಲರೂ ವೈಯಕ್ತಿಕವಾಗಿ ಉತ್ತಮ ಸ್ನೇಹಿತರಾಗಿದ್ದೆವು. ಕೇವಲ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾದಂತೆ ಸರ್ಕಾರ ನಡೆಸಿದಂತಹ ದುರಾಡಳಿತವನ್ನು ವಿರೋಧಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ನಾವೆಲ್ಲರೂ ಹೋಗಿದ್ದೆವು ಎಂದು ತಿಳಿಸಿದರು.
ಸಮಿಶ್ರ ಸರ್ಕಾರ ಅಲುಗಾಡುತ್ತಿತ್ತು ಇಂತಹ ಸರ್ಕಾರ ಇದ್ದರೆ ಅಭಿವೃದ್ಧಿಯಾಗುವುದಿಲ್ಲ. ಅಲ್ಲದೆ ತಮಗೆಲ್ಲರಿಗೂ ವೈಯಕ್ತಿಕವಾಗಿ ಅನ್ಯಾಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ಕೊಟ್ಟು ಹೊರಬಂದೆವು ಎಂದು ಹೇಳಿದರು.
ಚುನಾವಣೆಯಲ್ಲಿ ಸೋತಿರುವ ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಶಾಸಕರಾಗಿ ಗೆದ್ದಿರುವ ಮಹೇಶ್ ಕುಮಟಳ್ಳಿ ಅವರು ಕೂಡ ಒಂಟಿಯಾಗುವುದಿಲ್ಲ. ಅವರೆಲ್ಲರಿಗೂ ಕೂಡ ಸೂಕ್ತ ಸ್ಥಾನಮಾನವನ್ನೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಲಿದ್ದಾರೆ ಎಂದು ತಿಳಿಸಿದರು.