ತುಮಕೂರು : ಬೇಸಿಗೆ ರಜೆ ಬಳಿಕ ಸಿದ್ದಗಂಗಾ ಮಠದಲ್ಲಿ ಪುನಃ ಮಕ್ಕಳ ಕಲರವ ಆರಂಭವಾಗಿದೆ. ತ್ರಿವಿಧ ದಾಸೋಹ ಕ್ಷೇತ್ರದಲ್ಲಿ ಅಕ್ಷರ ಜ್ಞಾನದ ಕೃಷಿಗಾಗಿ ಮಕ್ಕಳು ಇತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಠದಲ್ಲಿ ವಿದ್ಯಾಭ್ಯಾಸಕ್ಕಾಗಿ ಮತ್ತು ಮಠದ ವಸತಿ ನಿಲಯಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಎಲ್ಲ ವ್ಯವಸ್ಥೆಗಳೊಂದಿಗೆ ಆವರಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹೀಗಾಗಿ ಮಠದಲ್ಲಿ ಎತ್ತ ನೋಡಿದರೂ ಮಕ್ಕಳು ಮತ್ತು ಪೋಷಕರು ಕಾಣಿಸುತ್ತಾರೆ.
ಈಗಾಗಲೇ ಮಠದಲ್ಲಿ 8,000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾರಿ ಪ್ರವೇಶಕ್ಕಾಗಿ 6,000 ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದಿವೆ. ಆದರೆ, ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ತಂಗಲು ಅವಕಾಶವಿದೆ. ಹೆಚ್ಚುವರಿಯಾಗಿ 4,000 ಅರ್ಜಿಗಳು ಬಂದಿರುವುದರಿಂದ ಆದ್ಯತೆ ಮೇರೆಗೆ ದಾಖಲಾತಿಗೆ ಅವಕಾಶ ಮಾಡಿಕೊಡಲಾಗಿದೆ.
ಸಿದ್ದಗಂಗಾಮಠದಲ್ಲಿ ಒಂದು ವಾರದಿಂದ ನಿರಂತರವಾಗಿ ದಾಖಲಾತಿ ಪ್ರಕ್ರಿಯೆ ನಡೆಯುತ್ತದೆ. ಉತ್ತರ ಕರ್ನಾಟಕ ಭಾಗ್ಯದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಗಮನಾರ್ಹ ಅಂಶ. ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಗದಗ, ರಾಯಚೂರು , ಬೀದರ್ , ವಿಜಯಪುರ ಜಿಲ್ಲೆಗಳಿಂದ ಪೋಷಕರು ತಮ್ಮ ಮಕ್ಕಳನ್ನು ಮಠದಲ್ಲಿ ಶಿಕ್ಷಣಕ್ಕಾಗಿ ದಾಖಲಿಸಲು ಕರೆದುಕೊಂಡು ಬಂದಿದ್ದಾರೆ.
ದೂರದ ಜೇವರ್ಗಿ ಇಂದ ತಮ್ಮ ಮಗನನ್ನು 4ನೇ ತರಗತಿಗೆ ದಾಖಲಾತಿ ಮಾಡಿಸಲು ಶರಣಪ್ಪ ಎಂಬುವರು ಬಂದಿದ್ರು. ಮಠದಲ್ಲಿನ ಶಿಕ್ಷಣದ ಗುಣಮಟ್ಟ, ಶಿಸ್ತುಬದ್ಧ , ಸಂಸ್ಕಾರದ ಮೂಲಕ ವಿದ್ಯಾಭ್ಯಾಸ ದೊರೆಯಲಿದೆ ಎಂಬ ಆಶಾಭಾವನೆಯಿಂದ ಸರ್ಕಾರಿ ಶಾಲೆಯನ್ನು ಬಿಡಿಸಿ ಮಠಕ್ಕೆ ಕರೆದುಕೊಂಡು ಬಂದು ದಾಖಲಿಸಲು ಮುಂದಾಗಿರುವುದಾಗಿ ಟಿವಿ ಭಾರತ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಾರಿ ನಿರೀಕ್ಷೆಗೂ ಮೀರಿ ಮಕ್ಕಳು ಮಠದಲ್ಲಿ ಶಿಕ್ಷಣ ಪಡೆಯಲು ಬಂದಿದ್ದಾರೆ ಮುಖ್ಯವಾಗಿ ಅವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿ ಬೇಕಿರುವುದು ಬಹು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮಾಹಿತಿ ನೀಡಿದರು.