ತುಮಕೂರು: ನಗರದಲ್ಲಿ 5 ದಿನಗಳ ಹಿಂದೆ ಗಿಣಿಯೊಂದು ಕಣ್ಮರೆಯಾಗಿದೆ. ನಾಪತ್ತೆಯಾಗಿರೋ ಮುದ್ದಿನ ಗಿಣಿಯನ್ನು ಪತ್ತೆ ಹಚ್ಚಲು ಮಾಲೀಕರು ಮತ್ತೊಂದು ಗಿಣಿಯ ಮೊರೆ ಹೋಗಿದ್ದಾರೆ. ಜಯನಗರ ಬಡಾವಣೆಯಲ್ಲಿ ವಾಸವಿರುವ ಈ ಕುಟುಂಬಸ್ಥರು ಗಿಣಿಗಳನ್ನು ಸಾಕಿದ್ದರು. ಎರಡು ಗಿಣಿಗಳ ಜನ್ಮ ದಿನವನ್ನು ಸಹ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಇದೀಗ ಆಫ್ರಿಕನ್ ಗ್ರೇ ಎಂಬ ಒಂದು ಗಿಣಿ ಕಾಣೆಯಾಗಿದ್ದು, ಹಗಲು ರಾತ್ರಿ ಎನ್ನದೇ ಸುತ್ತಮುತ್ತಲ ಬಡಾವಣೆಯಲ್ಲಿ ಹುಡುಕಾಟ ನಡೆಸಿದ್ದಾರೆ.
ನಗರದೆಲ್ಲೆಡೆ ಬ್ಯಾನರ್ಗಳನ್ನು ಕಟ್ಟಿ ಹುಡುಕಿ ಕೊಟ್ಟವರಿಗೆ ಬರೋಬ್ಬರಿ 50,000 ರೂ. ಬಹುಮಾನ ಕೊಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಆಫ್ರಿಕನ್ ಗ್ರೇ ಜಾತಿಯ ಈ ಗಿಣಿಗೆ ರುಸ್ತುಮಾ ಎಂದು ಹೆಸರಿಟ್ಟಿದ್ದರು. ಅರ್ಜುನ್ ಮತ್ತು ರಂಜನಾ ದಂಪತಿ ಎರಡೂವರೆ ವರ್ಷಗಳಿಂದ ಪ್ರೀತಿಯಿಂದ ಈ ಎರಡು ಗಿಣಿಗಳನ್ನು ಮನೆಯಲ್ಲಿ ಸಾಕಿದ್ದರು.
ಇದನ್ನೂ ಓದಿ: ತುಮಕೂರು: ಕಳೆದು ಹೋಗಿರೋ ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ಘೋಷಿಸಿದ ಕುಟುಂಬ
ನಾಪತ್ತೆಯಾಗಿರೋ ಗಿಣಿಯ ಮಾಹಿತಿ ನೀಡುವಂತೆ ಈವರೆಗೂ 35 ಸಾವಿರ ಕರಪತ್ರಗಳನ್ನು ಹಂಚಿದ್ದಾರೆ. ಇದೀಗ ನಾಪತ್ತೆಯಾಗಿರೋ ಗಿಣಿ ಜೊತೆಯಲ್ಲಿದ್ದ ಮತ್ತೊಂದು ಗಿಣಿಯನ್ನು ಇಟ್ಟುಕೊಂಡು ನಗರದೆಲ್ಲೆಡೆ ಓಡಾಡುತ್ತಿದ್ದಾರೆ. ಈ ಗಿಣಿಯ ಸದ್ದಿಗೆ ಆ ಗಿಣಿ ಬರಬಹುದು ಎಂಬುದು ಇವರ ನಂಬಿಕೆ. ಮನೆಯಲ್ಲಿ ಯಾವುದೇ ರೀತಿಯ ಬೋನ್ ಇರಿಸಿರಲಿಲ್ಲ. ಮನೆಯ ಬಾಗಿಲು ತೆಗೆದಾಗ ತಪ್ಪಿಸಿಕೊಂಡು ಹೋಗಿದೆ ಎನ್ನುತ್ತಾರೆ ಗಿಣಿ ಮಾಲೀಕ ಅರ್ಜುನ್.
ಗಿಣಿ ಸಿಕ್ಕಿದ ಮೇಲೆ ಗುಜರಾತ್ನ ಪಾರ್ಕೊಂದರಲ್ಲಿ ಬಿಡಲಾಗುವುದು. ಸಿಗದೇ ಇದ್ದರೂ ಈ ಗಿಣಿಯನ್ನು ನಾವು ಅಲ್ಲಿಗೆ ಕೊಡುತ್ತೇವೆ. ಮತ್ತೊಮ್ಮೆ ಈ ರೀತಿಯ ಸಮಸ್ಯೆ ಸಂಭವಿಸಬಾರದೆನ್ನುವ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆಂದು ಮಾಲೀಕ ಅರ್ಜುನ್ ತಿಳಿಸಿದರು.