ತುಮಕೂರು : ಆಕೆ ತನ್ನ ತಾಯಿಯ ತಿಥಿ ಕಾರ್ಯಕ್ಕೆ ಹೊರಡುವ ಸಿದ್ದತೆಯಲ್ಲಿದ್ದರು, ಇತ್ತ ತವರು ಮನೆಯವರು ಕೂಡ ಮಗಳು ತಿಥಿ ಕಾರ್ಯಕ್ಕೆ ಬರ್ತಾಳೆ ಅಂತ ದಾರಿ ಕಾಯ್ತಿದ್ರು, ಸಾಲದ್ದಕ್ಕೆ ತಾಯಿ ಅಂದ್ರೆ ಆ ಮಹಿಳೆಗೆ ಪಂಚಪ್ರಾಣ ಹೀಗಾಗಿ, ಬಂದೇ ಬರ್ತಾಳೆ ಅಂತ ಸಹೋದರ, ಸಹೋದರಿಯರು, ಸಂಬಂಧಿಕರು ಕಾದು ಕುಳಿತಿದ್ರು. ಆದರೆ, ಸಂಜೆಯಾದರೂ ಆಕೆ ತಿಥಿ ಕಾರ್ಯಕ್ಕೆ ಬರ್ಲೇ ಇಲ್ಲ. ಎಲ್ಲಿ ಅಂತ ಹುಡುಕಲು ಹೋದವರಿಗೆ ಶಾಕಿಂಗ್ ಸುದ್ದಿಯೊಂದು ಕಾಯ್ದಿತ್ತು.
ಅಲಮೇಲಮ್ಮ ಮಿಸ್ಸಿಂಗ್: ಜಿಲ್ಲೆಯ ಮಧುಗಿರಿ ತಾಲೂಕಿನ ಗರಣಿ ಎಂಬ ಗ್ರಾಮದ ಮಹಿಳೆ ಅಲಮೇಲಮ್ಮ (45)ಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಮಗ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೊಬ್ಬ ಮಗ ಬೆಂಗಳೂರಿನಲ್ಲಿ ಬಿಕಾಂ ವಿದ್ಯಾಭ್ಯಾಸ ಓದುತ್ತಿದ್ದಾನೆ.
ಕಳೆದ ಬುಧವಾರ ಅಲಮೇಲಮ್ಮ ಅವರ ತಾಯಿಯ ಪುಣ್ಯ ತಿಥಿ ಇತ್ತು. ತಾಯಿ ಅಂದರೆ ಅಲಮೇಲಮ್ಮನಿಗೆ ಅಪಾರ ಪ್ರೀತಿ. ಹೀಗಾಗಿ ಮನೆ ಮಗಳ ಬರುವಿಕೆಗಾಗಿ ತವರು ಕಾಯುತ್ತಿತ್ತು. ಆದ್ರೆ, ತಿಥಿ ದಿನ ಅಲಮೇಲಮ್ಮ ಬಾರದ ಹಿನ್ನೆಲೆ ಎಲ್ಲರೂ ಕಾದು ಸುಸ್ತಾಗಿ, ಕೊನೆಗೆ ಆಕೆಯ ಗಂಡ ಸಿದ್ದಪ್ಪನಿಗೆ ಕರೆ ಮಾಡಿ ಅಲಮೇಲಮ್ಮ ಎಲ್ಲಿ ಅಂತ ಕೇಳಿದ್ದರು.
ನಿಮ್ಮಕ್ಕ ಆವಾಗ್ಲೆ ಹೋದ್ಲು: ಆದ್ರೆ, ಸಿದ್ದಪ್ಪ, ನಿಮ್ಮಕ್ಕನನ್ನು ನಾನೇ ಬೆಳಗ್ಗೆ 8ಗಂಟೆಯ ಬಸ್ಸಿಗೆ ಹತ್ತಿಸಿ ಬಂದಿದ್ದೇನೆ ಅಂತ ಹೇಳಿದ್ದ. ಇದರಿಂದ ಗಾಬರಿಯಾದ ಸಂಬಂಧಿಕರು ಗೌರಿಬಿದನೂರು, ಮಧುಗಿರಿ ಪಟ್ಟಣ, ಆಸ್ಪತ್ರೆ ಸೇರಿದಂತೆ ಎಲ್ಲ ಕಡೆ ಹುಡುಕಾಡಿದ್ದರು. ಇದ್ಯಾವುದೂ ನನಗೆ ಸಂಬಂಧವೇ ಇಲ್ಲವೆಂಬಂತೆ ಗಂಡ ಸಿದ್ದಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೆ , ಹೆಂಡತಿ ಕುರಿತು ಕೇಳಿದ್ರೆ, ನಾನು ಹುಡುಕಿ ಹುಡುಕಿ ಸುಸ್ತಾಗಿದ್ದೀನಿ ನಿಮಗೆ ಬೇಕಾದ್ರೆ ಹುಡುಕಿಕೊಳ್ಳಿ ಎಂದು ಹೇಳಿ ಬಿಟ್ಟಿದ್ದ.
ಅಪ್ಪನ ಮೇಲೆ ಮಗನಿಗೆ ಡೌಟ್ : ಒಂದೆಡೆ ಅಲಮೇಲಮ್ಮ ಮಿಸ್ಸಿಂಗ್ ಮತ್ತೊಂದು ಕಡೆ ಗಂಟೆಗೊಂದು ರೀತಿಯಲ್ಲಿ ಸಿದ್ದಪ್ಪ ಮಾತಾಡುತ್ತಿದ್ದ. ಇದರಿಂದ ಅನುಮಾನಗೊಂಡ ಸಂಬಂಧಿಕರು ಯಾವುದಕ್ಕೂ ಇರ್ಲಿ ಅಂತ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ದೂರು ದಾಖಲು ಮಾಡಿಕೊಂಡಿದ್ದ ಪೊಲೀಸರು ಇಲ್ಲೇ ಎಲ್ಲೆ ಹೋಗಿರ್ತಾರೆ, ಬರ್ತಾರೆ ಅಂತೇಳಿ ವಾಪಸ್ ಕಳಿಸಿದ್ದರು. ಆದರೆ, ಪೊಲೀಸರು ತಮ್ಮ ಕಾರ್ಯವನ್ನ ಶುರು ಮಾಡಿಕೊಂಡಿದ್ರು, ಸಾಲದ್ದಕ್ಕೆ ಅದೇ ಟೈಂ ಗೆ ನಮ್ಮಪ್ಪನ ಮೇಲೆಯೇ ನನಗೆ ಡೌಟ್ ಅಂತ ಸ್ವತಃ ಮಗನೇ ಪೊಲೀಸರ ಮುಂದೆ ಹೇಳಿದ್ದ.
ಸಿದ್ದಪ್ಪನ ನವರಂಗಿ ಹೇಳಿಕೆ : ಇದರಿಂದ ತನಿಖೆ ಚುರುಕುಗೊಳಿಸಿದ ಪೊಲೀಸರು, ಆ ದಿನ ಸಿದ್ದಪ್ಪನನ್ನು ಠಾಣೆಗೆ ಕರೆಸಿ ಟ್ರೀಟ್ ಮೆಂಟ್ ಕೊಟ್ರು. ಇದಕ್ಕೆ ಬೆದರಿದ ಸಿದ್ದಪ್ಪ ನನ್ನ ಹಿರಿಮಗನ ಬಳಿ ಮಾತನಾಡ್ಬೇಕು ಅಂತ ಬೈಕ್ನಲ್ಲಿ ವಾಪಸ್ ಬರೋ ವೇಳೆ ಒಂದೊಂದೇ ನಿಜ ಕಕ್ಕಿದ್ದ. ಆಸ್ತಿ ವಿಚಾರವಾಗಿ ಗಲಾಟೆ ನಡೀತು, ನಾನು ಸಿಟ್ಟಿನಲ್ಲಿ ಅಲಮೇಲಮ್ಮನ ತಳ್ಳಿದೆ ಆಗ ರಾಡ್ಗೆ ಗುದ್ದಿಕೊಂಡು ನಿಮ್ಮಮ್ಮ ಸತ್ತೇಹೋದ್ಲು, ಇದರಿಂದ ನನಗೆ ಭಯ ಆಗಿ ಏನ್ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ. ಅದಕ್ಕೆ ಮನೆ ಮುಂದೆಯೇ ಮೃತ ದೇಹವನ್ನ ಹೂತಾಕಿದ್ದೇನೆ ಅಂತ ಹೇಳಿದ್ದಾನೆ.
ಮಧುಗಿರಿ ಮಹಿಳೆ ಹತ್ಯೆ ಪ್ರಕರಣ: ಸದ್ಯ ನನಗೇನೂ ಗೊತ್ತಿಲ್ಲ ಎಂದು ನಾಟಕವಾಡಿ, ನಂತರ ಮಕ್ಕಳ ಮುಂದೆ ಅಮಾಯಕನ ರೀತಿ ವರ್ತನೆ ಮಾಡಿದ್ದ ಸಿದ್ದಪ್ಪ ಜೈಲು ಕಂಬಿ ಹಿಂದೆ ಬಿದ್ದಿದ್ದಾನೆ. ಆದರೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಕಣ್ಣೀರುಡುತ್ತಿದ್ದಾರೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.