ತುಮಕೂರು: ಮಹಾನಗರ ಪಾಲಿಕೆಯಲ್ಲಿ ಕ್ರಾಂತಿಕಾರಿ ಪ್ರಯತ್ನವೊಂದು ಯಾವುದೇ ಮುಲಾಜಿಗೂ ಒಳಗಾಗದೆ ಸದ್ದಿಲ್ಲದೆ ಸಾಗಿದೆ. ಪಾಲಿಕೆ ಆಯುಕ್ತ ಭೂಬಾಲನ್ ಅವರು ಪ್ಲಾಸ್ಟಿಕ್ ನಿಷೇಧಿಸಲು ಪಣ ತೊಟ್ಟಿದ್ದು, ಆಯುಕ್ತರ ಈ ಕ್ರಮ ಬಹು ಶ್ಲಾಘನೆಗೆ ಪಾತ್ರವಾಗಿದೆ.
ಮೂರು ತಿಂಗಳಿನಿಂದ ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಲಾಗುತ್ತಿದೆ. ಆಯುಕ್ತರ ಪ್ಲಾಸ್ಟಿಕ್ ನಿಷೇಧದ ಕಾರ್ಯಚರಣೆ ಕೂಡ ವಿಭಿನ್ನ ಸ್ವರೂಪದ್ದಾಗಿದೆ. ಬೆಳ್ಳಂ ಬೆಳಗ್ಗೆ ಬೈಕ್ ಹತ್ತಿ ಹೊರಡುವ ಭೂಬಾಲನ್ ತುಮಕೂರು ನಗರದ ಯಾವ ವಾರ್ಡ್ನಲ್ಲಿ ಪ್ರತ್ಯಕ್ಷವಾಗುತ್ತಾರೆ ಎಂಬುದು ಊಹಿಸಲಾಗುತ್ತಿಲ್ಲ. ಹೀಗಾಗಿ ಪಾಲಿಕೆ ಸಿಬ್ಬಂದಿ ಆಯುಕ್ತರ ಪೋನ್ ಕರೆಗೆ ಬೆಳಗ್ಗೆಯೇ ಮೈ ಚಳಿ ಬಿಟ್ಟು ಸಿದ್ಧರಾಗಿರುತ್ತಾರೆ.
ಪೋನ್ ಬಂದೊಡನೆ ಅವರು ಸೂಚಿಸಿದ ಸ್ಥಳಕ್ಕೆ ತಂಡೋಪತಂಡವಾಗಿ ತೆರಳುವ ಪಾಲಿಕೆ ಸಿಬ್ಬಂದಿಗೆ ಅಚ್ಚರಿ ಕಾದಿರುತ್ತದೆ. ಅದರಲ್ಲಿ ಬಹುಸೂಕ್ಷ್ಮವಾಗಿ ಪ್ಲಾಸ್ಟಿಕ್ ಬಳಕೆ ವ್ಯವಸ್ಥೆಯನ್ನು ಆಯುಕ್ತರೇ ಪತ್ತೆ ಹಚ್ಚಿರುತ್ತಾರೆ. ತಕ್ಷಣ ಅವರ ಸೂಚನೆಯಂತೆ ಅಂಗಡಿಗಳಲ್ಲಿನ ಪ್ಲಾಸ್ಟಿಕ್ಗಳನ್ನು ವಶಕ್ಕೆ ತೆಗೆದುಕೊಂಡು ಎಣಿಕೆ ಹಾಕಿ ದಂಡ ವಿಧಿಸುತ್ತಾರೆ. ಸಾಮಾನ್ಯ ಜನರಂತೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಕುರಿತು ಪರಿಶೀಲಿಸಿ ನಂತರ ಪಾಲಿಕೆ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳುತ್ತಾರೆ. ಈ ಮೂಲಕ ದಾಳಿಯ ಮಾಹಿತಿ ಸೋರಿಕೆ ಆಗುವುದಿಲ್ಲ ಎನ್ನುತ್ತಾರೆ ಭೂಬಾಲನ್.
ಹಲವು ಕಡೆ ಕ್ಯಾಂಟೀನ್ ಮಾಲೀಕರು ಸಿಟ್ಟಿಗೆದ್ದು ಸಾಮಗ್ರಿಗಳನ್ನೇ ಎಸೆದದ್ದು ಉಂಟು. ಅಲ್ಲದೆ ಮೂರು ತಿಂಗಳಲ್ಲಿ ಎರಡು ಬಾರಿ ಹಲ್ಲೆ ಯತ್ನ ಕೂಡ ನಡೆದಿದೆ. ಬಾರ್ ವೊಂದರ ಮೇಲೆ ದಾಳಿ ನಡೆಸಿದಾಗ ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿತ್ತು. ಅಲ್ಲದೆ ಆರೋಗ್ಯ ನಿರೀಕ್ಷಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಕಾನೂನು ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರಿಗೆ ಧಕ್ಕೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಪದೇ ಪದೇ ಪ್ಲಾಸ್ಟಿಕ್ ಬಳಸುವುದು ಕಂಡುಬಂದ್ರೆ ದಂಡದ ಹಣವನ್ನು ದ್ವಿಗುಣದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ. ಕಳೆದ ಮೂರು ತಿಂಗಳಿನಿಂದ 91 ಅಂಗಡಿಗಳು, ಹೋಟೆಲ್ಗಳ ಮೇಲೆ ದಾಳಿ ನಡೆಸಿ 2 ಲಕ್ಷ ರೂ. ದಂಡ ಹಾಕಿ 8 ಟನ್ ಪ್ಲಾಸ್ಟಿಕ್ ಬ್ಯಾಗ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂ ಬಾಲನ್.
ಪಾಲಿಕೆ ಆಯುಕ್ತರ ಕ್ರಾಂತಿಕಾರಕ ಹೆಜ್ಜೆಯ ಪರಿಣಾಮ ತುಮಕೂರು ನಗರದಲ್ಲಿ ಶೇ.80ರಷ್ಟು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿದೆ. ಅದ್ರಲ್ಲಿ ಎಳನೀರು ಕುಡಿಯಲು ಬಳಸುವ ಸ್ಟ್ರಾ ದಿಂದ ಹಿಡಿದು ಪ್ಲಾಸ್ಟಿಕ್ ಕೈ ಚೀಲದವರೆಗೂ ತುಮಕೂರಿನಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ. ಪ್ಲಾಸ್ಟಿಕ್ ಸ್ಟ್ರಾ ಹುಡುಕಿದ್ರೂ ತುಮಕೂರು ನಗರದಲ್ಲಿ ಸಿಗುತ್ತಿಲ್ಲ. ಹೀಗಾಗಿ ಪರ್ಯಾಯವಾಗಿ ಮಾರಾಟವಾಗುತ್ತಿರೋ ಪೇಪರ್ ಸ್ಟ್ರಾ ತಂದು ಕೊಡಲಾಗುತ್ತಿದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ಲೋಕೇಶ್.