ತುಮಕೂರು: ಹೊಸ ಕಾಯ್ದೆಗಳನ್ನು ಜಾರಿ ಮಾಡಿ ಜನರಲ್ಲಿ ಗೊಂದಲ ಹುಟ್ಟು ಹಾಕುವ ಬದಲು ಕೇಂದ್ರ ಸರ್ಕಾರ ದೇಶದ ಸಮಸ್ಯೆ, ಅಭಿವೃದ್ಧಿಗಳತ್ತ ಗಮನ ಹರಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಆದಷ್ಟು ಶೀಘ್ರವಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಮತ್ತು ಎಲ್ಲಾ ಸ್ಥಾನಗಳಿಗೆ ಸದಸ್ಯರನ್ನು ನೇಮಿಸಿ ಹೈಕಮಾಂಡ್ ಪ್ರಕಟಣೆ ಮಾಡುವುದೆಂಬ ನಿರೀಕ್ಷೆ ಇದೆ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ, ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
ಅನುದಾನದ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಮೊದಲಿನಿಂದಲೂ ಒತ್ತಾಯ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರದಿಂದ ಬರುವ ಹಣದ ಜೊತೆಗೆ ವಿಶೇಷ ಅನುದಾನ ನೀಡಬೇಕಿದೆ. ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಂದು ಹುಬ್ಬಳ್ಳಿಗೆ ಬಂದಿದ್ದು, ಆ ಅನುದಾನವನ್ನು ಘೋಷಿಸಿ ಹೋಗಬೇಕು ಎಂದರು.
ಎಸ್ಡಿಪಿಐ ಸಂಘಟನೆಯನ್ನು ಯಾವ ಕಾರಣಕ್ಕೆ ನಿಷೇಧ ಮಾಡಲಾಗುತ್ತಿದೆ ಎಂಬುದನ್ನು ಗೃಹ ಸಚಿವರು ತಿಳಿಸಬೇಕು. ಪೌರತ್ವಕ್ಕೆ ಈ ರೀತಿಯ ಗೊಂದಲ ಸೃಷ್ಟಿಸುವ ಅವಶ್ಯಕತೆಯಿಲ್ಲ. ಈಗಾಗಲೇ ಸಂವಿಧಾನದಲ್ಲಿ ತಿಳಿಸಿರುವ ರೀತಿ ನಡೆದುಕೊಂಡರೆ ಸಾಕಾಗುತ್ತದೆ. ಹೊಸ ರೀತಿಯ ಕಾನೂನುಗಳ ಮೂಲಕ ದೇಶದಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ. ದೇಶದಲ್ಲಿ ಬಡತನ, ರೈತರ ಸಮಸ್ಯೆಗಳ ಜೊತೆಗೆ ಅನೇಕ ಸಮಸ್ಯೆಗಳಿವೆ. ಜೊತೆಗೆ ರಾಜ್ಯಗಳಲ್ಲಿ ಶಿಕ್ಷಣದ ಗುಣಮಟ್ಟ ಮತ್ತಷ್ಟು ಹೆಚ್ಚಿಸಬೇಕಿದೆ. ಇವೆಲ್ಲವನ್ನೂ ಬಿಟ್ಟು ಕೇಂದ್ರ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪರಮೇಶ್ವರ್ ಭಾಗವಹಿಸದೆ ಇರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸಾರಿ ಆಗಿಲ್ಲ ಮುಂದಿನ ಕೆಡಿಪಿ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.