ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹಲವು ದಿನಗಳಿಂದ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆ ಎಸ್ ನಂದಿಹಳ್ಳಿ ಗ್ರಾಮದ ತೋಟದ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಬಿದ್ದಿದೆ.
ಆರು ವರ್ಷದ ಗಂಡು ಚಿರತೆ ಇದಾಗಿದ್ದು, ಹಲವು ದಿನಗಳಿಂದ ಜನ-ಜಾನುವಾರುಗಳ ಮೇಲೆ ದಾಳಿ ನಡೆಸಿ ಭೀತಿ ಮೂಡಿಸಿತ್ತು. ಚಿರತೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದ್ದರು. ಬೋನಿಗೆ ಬಿದ್ದಿದ್ದ ಚಿರತೆಯನ್ನು ಕಂಡು ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.
ಒಂದು ಹಂತದಲ್ಲಿ ಸುತ್ತಲೂ ಜನರು ಜಮಾಯಿಸಿದ್ದನ್ನು ಕಂಡ ಚಿರತೆ ಬೋನಿನಲ್ಲಿಯೇ ರೋಷಾವೇಶದಿಂದ ಓಡಾಡುತ್ತಿತ್ತು. ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಿದ್ದಾರೆ.