ತುಮಕೂರು: ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಗ್ರಾಮೀಣ ಭಾಗ ಪ್ರದೇಶದ ಸಾರ್ವಜನಿಕರಿಗೆ ಕುಡಿಯುವ ನೀರು ದೊರೆಯದಂತಾಗಿದ್ದು, ಜಿಲ್ಲೆಯ ಪಿ.ಡಿ.ಒಗಳು ಇ.ಒಗಳು ಏನು ಮಾಡುತಿದ್ದೀರಾ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಲತಾ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಸಭೆ ಪ್ರಾರಂಭವಾಗುತಿದ್ದಂತೆ ಕುಡಿಯುವ ನೀರಿನ ಬಗ್ಗೆ ಚರ್ಚೆ ಆರಂಭಿಸಿದ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲೆಯಲ್ಲಿ ಎಲ್ಲಾ ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತಿಲ್ಲ ಎಂದು ನನಗೆ ಪೋನ್ ಮಾಡಿ ದೂರು ನೀಡುತಿದ್ದಾರೆ ಎಂದರೆ, ಅಲ್ಲಿನ ಅಧಿಕಾರಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿ ಏನು ಮಾಡುತ್ತಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿ ಬಾರಿ ನಡೆದ ಸಭೆಯಲ್ಲಿಯೂ ಸುಮ್ಮನೆ ಸಬೂಬುಗಳನ್ನು ಹೇಳಿ ಹೋಗುವುದಲ್ಲ, ಅಧಿಕಾರಿಗಳು ಇರುವುದೇ ಸರಿಯಾಗಿ ಕಾರ್ಯನಿರ್ವಹಿಸಲು. ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿ ಎಂದು ಸೂಚಿಸಿದರು.