ತುಮಕೂರು: ಜಿಲ್ಲೆಯ ವಿವಿಧೆಡೆ ಅದರಲ್ಲೂ ಬಯಲುಸೀಮೆ ಭಾಗದಲ್ಲಿ ಈ ಬಾರಿ ಅಪಾರ ಪ್ರಮಾಣದ ಮಳೆಯಾಗಿದೆ. ಹೀಗಾಗಿ, ಬಹುತೇಕ ಎಲ್ಲಾ ಕೆರೆ ಕಟ್ಟೆಗಳು ತುಂಬಿಹೋಗಿವೆ. ಇನ್ನು ಕೆಲ ಕೆರೆಗಳು ಸಂಪೂರ್ಣ ಭರ್ತಿ ಆಗಿರುವ ಹಿನ್ನೆಲೆ ಅನೇಕ ಕೆರೆಗಳು ಒಡೆದು ನೀರು ಹರಿದು ಹೋಗುತ್ತಿದೆ.
ಕೊರಟಗೆರೆ ತಾಲೂಕಿನ ಕಾವರ್ಗಲ್ ಕಂಬದ ಹಳ್ಳಿ ಕೆರೆ ಒಡೆದು ಹೋಗಿದ್ದು ಅಪಾರ ಪ್ರಮಾಣದ ನೀರು ಅಕ್ಕಪಕ್ಕದ ಹೊಲ ಗದ್ದೆ ತೋಟಗಳಿಗೆ ನುಗ್ಗಿ ಸಾಕಷ್ಟು ನಷ್ಟ ಸಂಭವಿಸಿದೆ. ಕೆರೆ ಸಮೀಪದಲ್ಲಿ ಇದ್ದಂತಹ ತೆಂಗಿನ ತೋಟಗಳು ಹಾಗೂ ಮೆಕ್ಕೆಜೋಳ ಜಮೀನಿನಲ್ಲಿ ಕೆರೆಯ ನೀರು ಜೊತೆಯಲ್ಲಿ ಅಪಾರ ಪ್ರಮಾಣದ ಕಲ್ಲು ಬಂಡೆಗಳು ಹರಿದು ಬಂದಿದ್ದು, ಬೆಳೆ ಸಂಪೂರ್ಣ ನಷ್ಟವಾಗಿದೆ.
ಈ ಕುರಿತಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಹೊಲಗದ್ದೆಗಳಲ್ಲಿ ತುಂಬಿಕೊಂಡಿರುವ ಕಲ್ಲು ಹಾಗೂ ಕೆರೆಯ ನೀರನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಓದಿ: ಚಿಕ್ಕಬಳ್ಳಾಪುರದಲ್ಲಿ ಮುಂದುವರೆದ ಮಳೆ: ಕೆರೆ ಕಟ್ಟೆ ಒಡೆದು ಬೆಳೆ ಹಾನಿ, ಅನ್ನದಾತ ಕಂಗಾಲು