ತುಮಕೂರು: ಕೊರೊನಾ ಸೋಂಕಿತ ಮಹಿಳೆ ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಿರುವ ಪ್ರದೇಶದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ದೊರೆಯದೆ ತೀವ್ರ ತೊಂದರೆಗೆ ಒಳಗಾಗಿದ್ದು ಸಂಬಂಧಿಸಿದವರು ತಕ್ಷಣ ಸ್ಪಂದಿಸುವಂತೆ ಆಗ್ರಹಿಸಿ ನಾಗರಿಕರು ಧರಣಿ ನಡೆಸಿದ ಘಟನೆ ಜಿಲ್ಲೆಯ ತುರುವೇಕೆರೆ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ.
ಸೀಲ್ಡೌನ್ ಆಗಿರುವ ಪ್ರದೇಶದಲ್ಲಿ 52 ಮನೆಗಳಿದ್ದು, ಸಾರ್ವಜನಿಕರು ದಿನಸಿ ಪದಾರ್ಥ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೀಲ್ಡೌನ್ ಮಾಡಿ ಹೋಗಿದ್ದಾರೆಯೇ ಹೊರತು ಯಾರೂ ಕೂಡ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೆಲವೆಡೆ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಮನೆಗೆ ಮಾತ್ರ ಸೀಲ್ಡೌನ್ ಮಾಡಲಾಗಿದೆ.
ಆದರೆ ತುರುವೇಕೆರೆ ಪಟ್ಟಣದ ವಿದ್ಯಾನಗರ ಬಡಾವಣೆಯ ರಸ್ತೆಯನ್ನು ಸೀಲ್ಡೌನ್ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ವಿದ್ಯಾನಗರ ಬಡಾವಣೆಯ ಪುರಸಭೆ ಸದಸ್ಯ ರವಿ ಎಂಬುವರು ಬಡಾವಣೆ ನಾಗರಿಕರಿಗೆ ಸ್ಪಂದಿಸುತ್ತಿದ್ದು, ಅಧಿಕಾರಿಗಳು ಇದಕ್ಕೆ ಸಾಥ್ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.