ತುಮಕೂರು: ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೊರಟಗೆರೆ ತಹಶೀಲ್ದಾರ್ ವಿಭಿನ್ನ ಕಾರ್ಯಕ್ಕೆ ಮುಂದಾಗಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಹಶೀಲ್ದಾರ್ ನಾಹಿದಾ ಬಾನು ಜಮ್ಜಮ್, ‘ತಹಶೀಲ್ದಾರ್ ನಡೆ ಶಾಲಾ ಮಕ್ಕಳ ಕಡೆ’ ಎಂಬ ಅಭಿಯಾನ ಆರಂಭಿಸಿದ್ದು, ಸರ್ಕಾರಿ ಶಾಲೆಗೆ ಭೇಟಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
ವಾರದಲ್ಲಿ 4 ದಿನ ತಾಲೂಕಿನ ಒಂದು ಗ್ರಾಮಕ್ಕೆ ತೆರಳಿ ಅಲ್ಲಿನ ಸರ್ಕಾರಿ ಶಾಲೆಯ ಸ್ಥಿತಿಗತಿ ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಶಾಲಾ ಆವರಣದಲ್ಲಿಯೇ ಸ್ಥಳೀಯರು, ಪೋಷಕರ ಸಭೆ ನಡೆಸಿ ಶಾಲೆಗಳ ಗುಣಮಟ್ಟದ ಕುರಿತು ಚರ್ಚಿಸುತ್ತಿದ್ದಾರೆ. ಅಲ್ಲದೇ ಅಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೂರಕ ಕ್ರಮ ಕೈಗೊಳ್ಳುತ್ತಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗ್ರಾಮದಲ್ಲಿನ ಮಕ್ಕಳ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ತೆರೆಯುವ ಕಾರ್ಯ ಸುಗಮಗೊಳಿಸುತ್ತಿದ್ದಾರೆ. ತಹಶೀಲ್ದಾರ್ ಇತ್ತೀಚೆಗೆ ಬೋಡಬಂಡೇನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿ ಪರಿಶೀಲನೆ ನಡೆಸಿದ್ದರು. ತಹಶೀಲ್ದಾರ್ ಸರ್ಕಾರಿ ಶಾಲೆಗಳತ್ತ ವಿಶೇಷ ಗಮನಹರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.