ತುಮಕೂರು: ಕಳೆದ ವರ್ಷ 30 ಜನರು ಡೇಂಘಿ ರೋಗದಿಂದ ಅಸ್ವಸ್ಥರಾಗಿದ್ದರು. ಆದರೆ ಈ ಬಾರಿ ಮೂರು ಜನ ಮಾತ್ರ ಅಸ್ವಸ್ಥರಾಗಿದ್ದಾರೆ. ರಾಜ್ಯಕ್ಕೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎಂದು ಜಿಲ್ಲಾ ಪಂಚಾಯಿತ್ ಸಿಇಒ ಶುಭಾ ಕಲ್ಯಾಣ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನರ್ಸಿಂಗ್ ಕಾಲೇಜುಗಳ ಸಹಯೋಗದಲ್ಲಿ ಟೌನ್ ಹಾಲ್ ವೃತ್ತದಿಂದ ಹಮ್ಮಿಕೊಳ್ಳಲಾಗಿದ್ದ 'ರಾಷ್ಟ್ರೀಯ ಡೇಂಘಿ ದಿನಾಚರಣೆ' ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿರುವ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ಮಾತ್ರ ರೋಗ ನಿಯಂತ್ರಣ ಮಾಡಲು ಸಾಧ್ಯ.
ಪ್ರತಿಯೊಬ್ಬರೂ ಮನೆಯಲ್ಲಿ ಅನಗತ್ಯ ನೀರಿನ ಶೇಖರಣೆಯನ್ನು ತಪ್ಪಿಸಿ, ಮನೆಯ ಸುತ್ತಮುತ್ತಲಿನಲ್ಲಿ ಮಳೆ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನೀರು ಸಂಗ್ರಹ ಮಾಡುತ್ತಾರೆ. ಒಂದು ವಾರಕ್ಕಿಂತ ಹೆಚ್ಚು ಕಾಲ ನೀರನ್ನು ಸಂಗ್ರಹಿಸಬಾರದು. ಈಗಾಗಲೇ ಆಶಾ ಕಾರ್ಯಕರ್ತೆಯರು ನೀರು ಸಂಗ್ರಹವಾಗಿರುವ ತೊಟ್ಟಿಗಳಿಗೆ ಲಾರ್ವಾಗಳನ್ನು ಬಿಡುವ ಮೂಲಕ ಡೇಂಘಿ ಜ್ವರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.