ತುಮಕೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಕೋಲಾರದ ಕಾಂಗ್ರೆಸ್ನಲ್ಲಿ ದೊಡ್ಡನಾಯಕರಿದ್ದಾರೆ. ಅವರ ಬುಡ ಅಲ್ಲಾಡುತ್ತಿದೆ. ಆ ಬುಡ ಸರಿಪಡಿಸಿಕೊಳ್ಳಲು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಲಿ ಕೊಡಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಇಂದು ತುಮಕೂರು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಚಿಕ್ಕಬಳ್ಳಾಪುರ ಕಾರ್ಯಕ್ರಮಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಅವರ ಪಾರ್ಟಿಯಿಂದ ಅವರು ಎಲೆಕ್ಷನ್ ಪ್ರಚಾರಕ್ಕೆ ಬರ್ತಾರೆ, ಬೇಡ ಅನ್ನಲು ನಾನ್ಯಾರು. 2019ರಲ್ಲಿ ನನ್ನ ವಿರುದ್ಧವೂ ಕ್ಯಾಂಪೇನ್ ಮಾಡಿದ್ದಾರೆ. ಐದು ಕಡೆ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ತಾಯಿ ನವಜಾತ ಶಿಶು ಮರಣ ಪ್ರಕರಣದ ತನಿಖೆ ವರದಿ ಶೀಘ್ರದಲ್ಲಿ ಬರಲಿದೆ. ಕೆಲ ಸಿಬ್ಬಂದಿ ವರ್ತನೆಯಿಂದ ಈ ರೀತಿಯಾಗಿದೆ ಎಂಬುದು ಗೊತ್ತಾಗಿದೆ. ಮೊದಲನೇ ಮಗು ಶಂಕರಿ ಹೆಸರಿನಲ್ಲಿ 10 ಲಕ್ಷ ರೂಪಾಯಿ ಅನ್ನು ನಮ್ಮ ಇಲಾಖೆಯಿಂದ ಎಫ್.ಡಿ ಮಾಡ್ತಿದ್ದೇವೆ ಎಂದರು.
ಜಿಲ್ಲಾಸ್ಪತ್ರೆಯ ಶೌಚಾಲಯದ ಅವ್ಯವಸ್ಥೆ ಕಂಡು ಗರಂ: ಸುಧಾಕರ್ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಶೌಚಾಲಯದ ಸ್ಥಿತಿಗತಿಯನ್ನು ಕಂಡು ಅಧಿಕಾರಿಗಳ ವಿರುದ್ಧ ಗರಂ ಆದರು. ಅಲ್ಲದೆ ಚಿಕಿತ್ಸೆಯ ಸೌಲಭ್ಯದ ಕುರಿತು ರೋಗಿಗಳ ಬಳಿಯೇ ತೆರಳಿ ಮಾತನಾಡಿ ಮಾಹಿತಿ ಪಡೆದರು. ನವಜಾತ ಶಿಶುವನ್ನು ಇಟ್ಟುಕೊಂಡು ನಿಂತಿದ್ದ ಮಹಿಳೆಗೆ ಚಿಕಿತ್ಸೆಯ ಸೌಲಭ್ಯದ ಕುರಿತು ಮಾಹಿತಿ ಪಡೆದರು.
ಇದನ್ನೂ ಓದಿ : ಕೋಲಾರದಲ್ಲಿ ಸಿದ್ದರಾಮಯ್ಯಗೆ ಗೆಲುವು ಕಠಿಣ: ಸಚಿವ ಡಾ.ಕೆ.ಸುಧಾಕರ್