ತುಮಕೂರು: ''ಜೆಡಿಎಸ್‌ನವರು ಲೋಕಸಭೆಯ ಕೇವಲ ನಾಲ್ಕು ಸೀಟ್ಗಾಗಿ ಬಿಜೆಪಿ ಬಳಿ ಭಿಕ್ಷೆ ಬೇಡುತ್ತಿದ್ದಾರೆ. ಇದು ಜೆಡಿಎಸ್ಗೆ ನಾಚಿಕೆಗೇಡಿತನದ ಸಂಗತಿ'' ಎಂದು ಮಾಜಿ ಸಚಿವ ವೆಂಕಟರಮಣಪ್ಪ ಟೀಕಾಸಮರ ನಡೆಸಿದ್ದಾರೆ.
ಪಾವಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತು ಜೆಡಿಎಸ್ ಹಣೆಬರಹ ಎಲ್ಲರಿಗೂ ಗೊತ್ತಿದೆ ಎಂದರು. ''ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದಿರುವುದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಸರ್ಕಾರದಲ್ಲಿ ಶೇ 40ರಷ್ಟು ದುಡ್ಡು ತೆಗೆದುಕೊಳ್ಳುವುದು ಬಿಟ್ಟರೆ, ಬೇರಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ'' ಎಂದು ಆರೋಪಿಸಿದರು.
''ಬಿಜೆಪಿಗೆ 65 ಸೀಟ್‌ಗಳನ್ನು ಕೊಟ್ಟು ಸಾಕು ಮನೆಯಲ್ಲಿರಿ ಎಂದಿದ್ದಾರೆ ರಾಜ್ಯದ ಜನ. ಆದ್ರೆ ಯಡಿಯೂರಪ್ಪ ರಾಜ್ಯಾದ್ಯಂತ ಭ್ರಷ್ಟಾಚಾರದ ಬಗ್ಗೆ ಪ್ರಚಾರ ಮಾಡ್ತೀನಿ ಅಂತಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಾಡಿ ಯಾರಾದ್ರೂ ಮುಖ್ಯಮಂತ್ರಿ ಜೈಲಿಗೆ ಹೋಗಿದ್ದಿದ್ದರೆ ಅದು ಯಡಿಯೂರಪ್ಪ ಒಬ್ಬರೇ'' ಎಂದು ಟೀಕಿಸಿದ ಅವರು, ''ಅವರ ಕ್ಯಾಬಿನೆಟ್ನಲ್ಲಿದ್ದ ಬಹುತೇಕ ಮಂತ್ರಿಗಳು ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಮಂತ್ರಿಗಳೂ ಜೈಲಿಗೆ ಹೋಗಿಲ್ಲ'' ಎಂದರು.
''ನಾವು 224 ಸೀಟ್‌ಗಳನ್ನು ಗೆಲ್ಲುತ್ತೇವೆ. ನಾವೇ ಸರ್ಕಾರ ರಚನೆ ಮಾಡ್ತೀವಿ ಅಂತ ಹೇಳಿ ಜೆಡಿಎಸ್‌ನವರು 19 ಸೀಟ್ ಗೆದ್ದರು. ಈ ಹಿಂದೆ ಬಿಜೆಪಿಗೆ ಟೋಫಿ ಹಾಕಿ 18 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಮ್ಮ ಹೈಕಮಂಡ್ ಇವರ ಮನೆ ಬಾಗಿಲಿಗೆ ಹೋಗಿ ಅಧಿಕಾರ ಕೊಟ್ಟರು. ಆಗ ಮುಖ್ಯಮಂತ್ರಿಯಾಗಿ 14 ತಿಂಗಳು ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲೇ ಕಾಲ ಕಳೆದರು. ನಾನು ಸುಮಾರು ಸಲ ಅವರಿಗೆ ಹೇಳಿದ್ದೆ. ಕುಮಾರಸ್ವಾಮಿ ಅವರೇ ಪಾರ್ಟಿ ಬಿಡ್ತಾರಂತೆ, ಅವರನ್ನು ಕರೆದು ಮಾತಾಡಿ ಅಂತ ಸಲಹೆ ನೀಡಿದ್ದೆ. ಆಯ್ತಪ್ಪಾ ಮಾತಾಡ್ತೀನಿ ಅಂತ ಹೇಳಿ, ಅವರು ಅಮೆರಿಕಗೆ ಹೋಗಿ ಕುಳಿತುಕೊಂಡರು. ಇಲ್ಲಿ ಕುರಿಗಳ ವ್ಯಾಪಾರ ಆಯ್ತು. ಪಾವಗಡ ಸಂತೆಯಲ್ಲಿ ಕುರಿಗಳನ್ನು ವ್ಯಾಪಾರ ಮಾಡಿದಂಗೆ ಶಾಸಕರನ್ನು ವ್ಯಾಪಾರ ಮಾಡಿದ್ದರು'' ಎಂದು ಹೇಳಿದರು.
''ಬಿಜೆಪಿ ಹಿಂದಿನ ಬಾಗಿಲಿನಿಂದ ಬಂದ ಸರ್ಕಾರ. ಇವತ್ತು ಕಾಂಗ್ರೆಸ್ ಸರ್ಕಾರವನ್ನು ಭ್ರಷ್ಟ ಸರ್ಕಾರ ಅಂತಿದ್ದಾರೆ. ಭ್ರಷ್ಟಾಚಾರ ಮಾಡಿದ್ದು ನೀವು, ಕಮಲದ ಆಪರೇಷನ್ ಮಾಡಿದ್ದು ಯಡಿಯೂರಪ್ಪರ ಕಾಲದಲ್ಲಿ. ಇವರು ಬರೀ ಹಿಂದಿನ ಬಾಗಿಲಿನಲ್ಲಿ ಅಧಿಕಾರಕ್ಕೆ ಬಂದಿದ್ದಾರೆಯೇ ಹೊರತು, ಜೀವಮಾನದಲ್ಲಿ ಮುಂದಿನ ಬಾಗಿಲಲ್ಲಿ ಅಧಿಕಾರಕ್ಕೆ ಬಂದಿಲ್ಲ'' ಎಂದು ವೆಂಕಟರಮಣಪ್ಪ ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡದಂತೆ ಬಿ.ಕೆ.ಹರಿಪ್ರಸಾದ್ಗೆ ಕಾಂಗ್ರೆಸ್ ಹೈಕಮಾಂಡ್ ತಾಕೀತು