ತುಮಕೂರು : ನಮ್ಮ ಮನೆಗೆ ಅಡ್ಡಪಲ್ಲಕ್ಕಿ ತಂದವರು ನೀವು, ದೇವೇಗೌಡರು ನಿಮ್ಮನ್ನ ನಂಬಿದ್ರು. ನಾನಂತೂ ನಿಮ್ಮನ್ನ ನಂಬಿರಲಿಲ್ಲಾ. ನೀವು ಅಡ್ಡಪಲ್ಲಕ್ಕಿಲಿ ಕೂರಿಸಿಕೊಂಡು ಹೋಗಿ ಅರ್ಧ ದಾರಿಯಲ್ಲಿ ಕೈಬಿಟ್ರಿ ಎಂದು ಕಾಂಗ್ರೆಸ್ ಮುಖಂಡರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಶಿರಾ ತಾಲೂಕಿನ ಕಳ್ಳಂಬೆಳ್ಳದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿರಾ ಜನರು ಎಂದೂ ಕೂಡ ಹಣಕ್ಕೆ ಮತ ಕೊಟ್ಟವರಲ್ಲ. ದುಡಿಮೆಗೆ ಗೌರವ ಕೊಟ್ಟವರು. ಮೊನ್ನೆಯ ಸಭೆಯಲ್ಲಿ ಹಾಲನ್ನಾದ್ರೂ ಕೊಡಿ, ವಿಷವಾದ್ರೂ ಕೊಡಿ ಎಂದು ಹೇಳಿದ್ದೆ. ಅವತ್ತು ನಾನು ಕಣ್ಣಲ್ಲಿ ನೀರು ಹಾಕಿಲ್ಲ. ನಾವೆಲ್ಲಾ ಹಳ್ಳಿಯಿಂದ ಬಂದವರು, ಹಳ್ಳಿ ಭಾಷೆಯ ವಾಡಿಕೆಯಂತೆ ಕೇಳಿದ್ದೆ. ಆ ಮಹಾನುಭಾವ ಕುಮಾರಸ್ವಾಮಿಗೆ ಕಷಾಯ ಕೊಡಿ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಕಷಾಯನೂ ಕೊಡಲಾಗದ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ಪೇಪರ್ ಟೈಗರ್ ಮೈಸೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಗೊತ್ತಿಲ್ಲಾ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವೇ ಇಲ್ಲಾ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ ತಾಯಿ ಸಮಾನವಾದ ಪಕ್ಷ ಇದು. ಅವರು ಇದ್ದಾರೆ ಎಂದು ಗೊತ್ತಾಗಿದ್ದೇ ಜೆಡಿಎಸ್ ಪಕ್ಷದಿಂದ. ಜೆಡಿಎಸ್ ಪಕ್ಷ ಇನ್ನೊಬ್ಬರ ಹೆಗಲ ಮೇಲೆ ರಾಜಕಾರಣ ಮಾಡಬೇಕಾಗಿದೆ ಎಂದಿದ್ದಾರೆ. ನಾವೇನಾದ್ರೂ ನಿಮ್ಮ ಹೆಗಲು ಕೇಳಿಕೊಂಡು ಮನೆಗೆ ಬಂದಿದ್ವಾ ಎಂದು ಪ್ರಶ್ನಿಸಿದರು.
ಬಡವರು, ನೋವಿನಲ್ಲಿರುವವರ ಕಷ್ಟಗಳನ್ನ ಕಂಡು ಕಣ್ಣೀರು ಹಾಕಿದ್ದೇನೆ. ರಾಜಕೀಯ ಸ್ಥಾನ ಹೋಗಿದಕ್ಕಾಗಿ ಕಣ್ಣೀರು ಹಾಕಿಲ್ಲ. ನರೇಂದ್ರ ಮೋದಿ ಸಿದ್ದಾರಾಮಯ್ಯನವರದ್ದು 10 % ಸರ್ಕಾರ ಅಂದರು. ಸಿದ್ದರಾಮಯ್ಯನವರು, ಬಿಜೆಪಿಯದ್ದು 10% ಸರ್ಕಾರ ಎಂದಿದ್ದಾರೆ. ಆದರೆ, ನನ್ನ ಅವಧಿಯಲ್ಲಿ ಯಾವತ್ತೂ ಪರ್ಸಂಟೇಜ್ ಸರ್ಕಾರ ಅನ್ನೋ ಮಾತು ಬಂದಿಲ್ಲ ಎಂದರು.
ಈ ಚುನಾವಣೆಯಲ್ಲಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಅಂದಿದ್ದಾರೆ. ಒಳ ಒಪ್ಪಂದ ಆಗಿರುವುದು, ಸಿದ್ದರಾಮಯ್ಯನವರಿಗೂ ಮತ್ತು ಬಿಜೆಪಿಗೂ. ಬಿಜೆಪಿ ಸೇರಿದ ರಾಜೇಶ್ ಗೌಡ ಅವರೇ ಅಭ್ಯರ್ಥಿ ಎಂದು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ರಾಜೇಶ್ ಗೌಡ ಹಾಗೂ ಸಿದ್ದರಾಮಯ್ಯ ಪುತ್ರ ಯತೀಂದ್ರ ನಡುವಿನ ಸಂಬಂಧ ಏನು. ಯತೀಂದ್ರ ಹಾಗೂ ರಾಜೇಶ್ ಗೌಡ ವ್ಯವಹಾರ ಪಾಲುದಾರರು. ರಾಜೇಶ್ ಗೌಡ ತಂದೆ ಮೂಡಲಗಿರಿಯಪ್ಪ ಕಾಂಗ್ರೆಸ್ನಿಂದ ಸಂಸದರಾಗಿದ್ದವರು ಬಿಜೆಪಿಗೆ ನೀವು ಕಳಿಸಿದ್ದೋ ಅಥವಾ ಯಾರು ಕಳಿಸಿದ್ರು ಅನ್ನುವುದುನ್ನು ನೀವೆ ಹೇಳಬೇಕು ಎಂದು ಹೇಳಿದರು.
ನಮ್ಮ ಪಕ್ಷ ಬಿಜೆಪಿಯ ಬಿ ಟೀಂ ಆಗಿದ್ದರೆ 5 ವರ್ಷ ನಾನೇ ಸಿಎಂ ಆಗ್ತಿದೆ. ಯಾರೂ ನನ್ನನ್ನ ಟಚ್ ಮಾಡೋಕೆ ಆಗ್ತಿರಲ್ಲಿಲ್ಲ. ಆರೆಸ್ಸೆಸ್ ಕಾರ್ಯಕರ್ತರು ದುಡ್ಡು ಹಿಡಿದುಕೊಂಡು ಬರ್ತಾರೆ. ಅದು ಲೂಟಿ ಹೊಡೆದ ಹಣ, ಆ ಹಣದ ಆಮಿಷಕ್ಕೆ ಬಲಿಯಾಗಬೇಡಿ. ನಾಳೆ ನಾಡಿದ್ದು ಅಭ್ಯರ್ಥಿ ಕುರಿತು ಒಂದು ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.