ತುಮಕೂರು: ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೇನೋ ಈ ಬಾರಿ ನಿರೀಕ್ಷೆಯಂತೆ ನಾಲೆಗಳ ಮೂಲಕ ನೀರು ಹರಿದುಬರುತ್ತಿದೆ, ಆದರೆ ಈ ನಾಲೆಗಳು ಕೊಲೆ ಗಡುಕರಿಗೆ ರಹದಾರಿಯಾಗಿ ಪರಿವರ್ತನೆಗೊಂಡಿದೆಯೇ ಎಂಬ ಪ್ರಶ್ನೆ ಮೂಡಿದೆ.
ಹೇಮಾವತಿ ನಾಲೆಯಲ್ಲಿ ಶವವೊಂದು ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸೆಪ್ಟೆಂಬರ್ 24ರಂದು ಮಹಿಳೆಯ ಶವವನ್ನ ಮೇಲಕ್ಕೆತ್ತಿ ತುರುವೇಕೆರೆ ಪೊಲೀಸರು ಮಹಜರು ಮಾಡಿದ್ದರು. ನಂತರ ಪೊಲೀಸರು ಅಪರಿಚಿತ ಶವ ಎಂದು ಶವಪರೀಕ್ಷೆ ನಡೆಸಿ ಅಂತ್ಯಸಂಸ್ಕಾರವನ್ನು ಕೂಡ ಮಾಡಿಬಿಟ್ಟಿದ್ದರು. ನಂತರ ಈ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಮೇಲ್ನೋಟಕ್ಕೆ ಅನೈತಿಕ ಸಂಬಂಧದ ಹಿನ್ನೆಲೆಯೇ ಕೊಲೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ 23 ರಂದು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನನ್ನ ತಾಯಿ ರಾಜಮತಿ ಕಾಣೆಯಾಗಿದ್ದಾರೆ ಎಂದು ಯುವತಿಯೊಬ್ಬರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು ರಾಜ್ಯದ ಇತರೇ ಪೊಲೀಸ್ ಠಾಣೆಗಳಿಗೆ ಮಹಿಳೆ ಕಾಣೆಯಾಗಿರುವುದರ ಬಗ್ಗೆ ಮಾಹಿತಿ ರವಾನಿಸಿದ್ದರು. ಈ ವೇಳೆಗಾಗಲೇ ತುರುವೇಕೆರೆ ಪೊಲೀಸ್ ಠಾಣೆಯವರು ಅಪರಿಚಿತ ಮಹಿಳೆ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದೆ. ಆದರೆ ವಾರಸುದಾರರು ಯಾರೂ ಇಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲಾಗಿದೆ ಅಂತ ಮಾಹಿತಿ ನೀಡಿದ್ದರು.
ತಕ್ಷಣ ಅಲರ್ಟ್ ಆದ ಜ್ಞಾನಭಾರತಿ ಪೊಲೀಸರು ಮಹಿಳೆ ಮೈಮೇಲಿದ್ದ ಬಟ್ಟೆಗಳನ್ನಾಧರಿಸಿ ಹಾಗೂ ಕುಟುಂಬದವರ ಸಹಕಾರದಿಂದ ಮಹಿಳೆಯ ಶವ ಬೆಂಗಳೂರಲ್ಲಿ ಕಾಣೆಯಾಗಿದ್ದ ರಾಜಮತಿಯದ್ದೇ ಎಂಬುದನ್ನು ಪತ್ತೆ ಮಾಡಿದ್ದರು. ಅಲ್ಲದೆ, ಇದು ನನ್ನ ತಾಯಿಯ ಮೃತದೇಹವೇ ಅಂತ ಮೃತಳ ಪುತ್ರಿ ಕನ್ಫರ್ಮ್ ಮಾಡಿದ್ದಾರೆ. ಇನ್ನು ಹೇಮಾವತಿ ನಾಲೆಯಲ್ಲಿ ಸರಾಗವಾಗಿ ಅಪಾರ ಪ್ರಮಾಣದ ನೀರು ತುಮಕೂರು ಜಿಲ್ಲೆಗೆ ಹರಿಯುತ್ತಿದ್ದು ಹಾಸನ ಜಿಲ್ಲೆಯ ನುಗ್ಗೆಹಳ್ಳಿ ಬಳಿ ರಾಜಮತಿ ಅವರನ್ನು ಕೊಲೆ ಮಾಡಿ ಅವರನ್ನು ನಾಲೆಗೆ ಬಿಸಾಡಲಾಗಿತ್ತು. ಶವವು ತುರುವೇಕೆರೆ ತಾಲೂಕಿನ ಕರಡಿಪುರ ಗ್ರಾಮದ ಬಳಿ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದೆ ಎಂದು ತುಮಕೂರು ಎಸ್ಪಿ ಡಾ.ಕೋನವಂಶಿಕೃಷ್ಣ ತಿಳಿಸಿದ್ದಾರೆ.
ಒಟ್ಟಿನಲ್ಲಿ ಜೀವವಾಹಿನಿಯಾದ ಹೇಮೆ ಕೊಲೆಗಡುಕರಿಗೆ ಜೀವ ತೆಗೆಯುವ ತಾಣವಾಗುತ್ತಿರುವುದು ದುರಂತವೇ ಸರಿ.