ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳ ವ್ಯಾಪಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತುಮಕೂರು ಮಹಾನಗರ ಪಾಲಿಕೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತುಮಕೂರು ಮಹಾನಗರ ಪಾಲಿಕೆ ಖಾಸಗಿ ಬಸ್ ನಿಲ್ದಾಣದಲ್ಲಿ ಐ.ಡಿ.ಎಸ್.ಎಂ.ಟಿ ಯೋಜನೆಯಡಿ ನೆಲ ಅಂತಸ್ತು ಮತ್ತು ಮೇಲಂತಸ್ತಿನಲ್ಲಿ ಸುಮಾರು 121 ವಾಣಿಜ್ಯ ಮಳಿಗೆಗಳನ್ನು ವಿವಿಧ ವಿಸ್ತೀರ್ಣಗಳಲ್ಲಿ ನಿರ್ಮಿಸಿ, ಆ ವಾಣಿಜ್ಯ ಮಳಿಗೆಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆದಾರರಿಗೆ ಬಹಿರಂಗ ಹರಾಜು ಮೂಲಕ ನಮಗೆ ಮಳಿಗೆಗಳನ್ನು ನೀಡಿದೆ.
ಅಂದಿನಿಂದ ಇಂದಿನವರೆಗೂ ಬಾಡಿಗೆ ಹಣವನ್ನು ಕಾಲಕಾಲಕ್ಕೆ ಮಹಾನಗರ ಪಾಲಿಕೆಗೆ ಕಟ್ಟುತ್ತ ಬರಲಾಗಿದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಮಾರ್ಚ್ ತಿಂಗಳಿನಿಂದ ಮಳಿಗೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ ಮಳಿಗೆಗಳ ಬಾಡಿಗೆ ಹಣವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ತುಮಕೂರು ನಗರ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣ ಮಳಿಗೆಗಳ ಬಾಡಿಗೆದಾರರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಾಡಿಗೆದಾರ ಕರಿಬಸವಯ್ಯ, ಖಾಸಗಿ ಬಸ್ ನಿಲ್ದಾಣದ ಅಂಗಡಿ ಮಳಿಗೆದಾರರು ಸಂಕಷ್ಟದಿಂದ ಬಳಲುತ್ತಿದ್ದಾರೆ. ಹಾಗಾಗಿ ಮಾರ್ಚ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಇರುವ ಬಾಡಿಗೆಯನ್ನು ಮನ್ನಾ ಮಾಡಬೇಕು. ಅದೇ ರೀತಿ ಸೆಪ್ಟಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳ ವರೆಗೆ ಶೇಕಡಾ 10 ಪರ್ಸೆಂಟ್ ಬಾಡಿಗೆ ಕಟ್ಟಲು ಅನುವು ಮಾಡಿಕೊಡಬೇಕು. ಅಲ್ಲದೇ ಈ ಬಾಡಿಗೆಗೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಬಾರದು ಎಂದು ಮನವಿ ಮಾಡಿದರು.