ತುಮಕೂರು: ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದ್ದು ಜನ-ಜಾನುವಾರುಗಳು ಮೇಲೆ ದಾಳಿ ನಡೆಸುವುದು ಸರ್ವೇಸಾಮಾನ್ಯವಾಗಿದೆ. ಇದೇ ರೀತಿ ದಾಳಿ ಮಾಡುತ್ತಿರುವ ಚಿರತೆಗಳನ್ನು ಅರಣ್ಯ ಇಲಾಖೆ ಸಹ ನಿರಂತರವಾಗಿ ಸೆರೆಹಿಡಿಯುತ್ತಿದೆ.
ಈಗಾಗಲೇ ಆನೆಗಳನ್ನು ಕರೆಸಿ ಹಾಗೂ ಚಿರತೆ ಹಿಡಿಯುವ ಹಿಡಿಯಲು ಅರಣ್ಯ ಇಲಾಖೆಯ ವಿಶೇಷ ತಂಡ ಕೂಡ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿತ್ತು. ಹೀಗಿದ್ದರೂ ಚಿರತೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಹತ್ತು ಜನರನ್ನು ಚಿರತೆಗಳು ಕೊಂದುಹಾಕಿವೆ.
ಮುಖ್ಯವಾಗಿ ಈ ರೀತಿ ಸೆರೆಹಿಡಿಯುತ್ತಿರುವ ಚಿರತೆಗಳನ್ನು ಜಿಲ್ಲೆಯಿಂದ ದೂರದ ಅರಣ್ಯ ಪ್ರದೇಶಗಳಿಗೆ ಸಾಗಿಸುವ ಬದಲು ಇಲ್ಲಿಯೇ ತಂದು ಕದ್ದುಮುಚ್ಚಿ ಬಿಡಲಾಗುತ್ತಿದೆ. ಈ ರೀತಿಯಾದ ಒಂದು ಪ್ರಕ್ರಿಯೆ ಸದ್ದಿಲ್ಲದೆ ನಡೆಯುತ್ತಿದೆ. ಮುಖ್ಯ ಕಾರಣ ಸೆರೆ ಹಿಡಿದಿರುವ ಚಿರತೆಗಳನ್ನು ತೆಗೆದುಕೊಂಡುಹೋಗಿ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗುತ್ತಿದೆ. ಇದನ್ನು ಬಹಿರಂಗವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿರತೆಗಳನ್ನು ವಾಪಸ್ ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ತಂದು ಬಿಡಲಾಗುತ್ತಿದೆ ಎಂದು ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ರಂಗನಾಥ ಆರೋಪಿಸಿದ್ದಾರೆ.
ಒಟ್ಟಾರೆ ಚಿರತೆಗಳಿಗೆ ಅಗತ್ಯವಿರುವ ಆಹಾರದ ವ್ಯವಸ್ಥೆಯನ್ನು ಕಲ್ಪಿಸಲು ಹೊಣೆಗಾರರು ವಿಫಲರಾಗಿದ್ದಾರೆ. ಇನ್ನು ಮುಂದಾದರೂ ಅಗತ್ಯ ಕ್ರಮ ಕೈಗೊಳ್ಳುವಂತೆ ಚಿಂತನೆ ನಡೆಸಬೇಕಿದೆ.