ತುಮಕೂರು: ಜಿಲ್ಲೆಯಲ್ಲಿ ಅರಣ್ಯದೊಡಲು ಬಗೆದು ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಅರಣ್ಯ ನಾಶವಾಗುತ್ತಿದ್ದರೂ ಮತ್ತಷ್ಟು ಕ್ವಾರಿಗಳಿಗೆ ಪರವಾನಗಿ ನೀಡಿರುವುದು ಆಘಾತಕಾರಿ ಎನಿಸಿದೆ.
ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣದಲ್ಲಿ ಏಳು ಜನರು ಬಲಿಯಾದ ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವಾಗಲೇ, ತುಮಕೂರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಸದ್ದು ಮಾಡುತ್ತಿದೆ. ಕ್ರಷರ್‌ಗಳು ಗಣಿಗಾರಿಕೆಗೆ ಪರವಾನಗಿ ಪಡೆಯುವಾಗ ಕಂದಾಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜತೆಗೆ ಅರಣ್ಯ ಇಲಾಖೆಯ ಎನ್‌ಒಸಿ ಮುಖ್ಯ. 2014 ರಲ್ಲಿ ಕಲ್ಲು ಗಣಿಗಾರಿಕೆ ಕಾಯ್ದೆ ಜಾರಿಗೆ ತರಲಾಗಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಕ್ವಾರಿಗಳಿಗೆ ಅನುಮತಿ ಕೊಡುವಂತಿಲ್ಲ. ಈ ಕಾಯ್ದೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಯಾವುದೇ ಹೊಸ ಕ್ವಾರಿಗಳಿಗೆ ಅನುಮತಿ ನೀಡಿಲ್ಲ. ಆದರೆ, ಕಲ್ಲುಗಣಿಗಾರಿಕೆ ಪರವಾನಗಿ ನವೀಕರಣ ಸಂದರ್ಭದಲ್ಲಿ ಈ ಕಾಯ್ದೆ ಉಲ್ಲಂಘಿಸಿರುವುದು ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಅರಣ್ಯಾಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.
ಶಾಸಕ ಗೌರಿಶಂಕರ್ ಗಂಭೀರ ಆರೋಪ
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಗೌರಿಶಂಕರ್, ಬ್ಲಾಸ್ಟ್ ಮಾಡಲು ಜಿಲೆಟಿನ್ ಬಳಸಲು ಅವಕಾಶವಿಲ್ಲ. ಆದರೆ ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮವಾಗಿ ಜಿಲೆಟಿನ್ ಬಳಸಲಾಗುತ್ತಿದೆ. ಗಣಿಗಾರಿಕೆ ನಡೆಸುತ್ತಿರುವ ಮಾಲೀಕರು ದೊಡ್ಡ ದೊಡ್ಡ ಕುಳಗಳಾಗಿದ್ದು, ಇವರಿಗೆ ಮಂತ್ರಿಯಿಂದ ಹಿಡಿದು ಸರ್ಕಾರದ ಸಂಪೂರ್ಣ ಬೆಂಬಲವಿದೆ. ಅಕ್ರಮವಾಗಿ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಮತ್ತು ಜಿಲ್ಲಾಡಳಿದ ಬೆಂಬಲವಿದೆ. ಒಬ್ಬ ರೈತ ಉಳುಮೆ ಮಾಡಲು ಭೂಮಿಯನ್ನು ಒತ್ತುವರಿ ಮಾಡಿದರೆ ಯಾವುದೇ ನೋಟಿಸ್ ನೀಡದೆ ಒದ್ದು ಒಳಗೆ ಹಾಕುತ್ತಾರೆ. ಆದರೆ ನೂರಾರು ಎಕರೆ ಅರಣ್ಯ ಇಲಾಖೆ ಭೂಮಿಯನ್ನು ಒತ್ತುವರೆ ಮಾಡಿ ಗಣಿಗಾರಿಕೆ ಮಾಡಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೀಸಲು ಅರಣ್ಯ ಪ್ರದೇಶದಲ್ಲಿ 24 ಕ್ವಾರಿಗಳು!
ಜಿಲ್ಲೆಯಲ್ಲಿ 70 ಕ್ರಷರ್‌ಗಳಿದ್ದು ಸದ್ಯ 49 ಚಾಲ್ತಿಯಲ್ಲಿವೆ. ಇದರಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ 33 ಕ್ವಾರಿಗಳಿರುವುದು ಆಘಾತಕಾರಿ ಅಂಶವೆನಿಸಿದೆ. ತುಮಕೂರು ತಾಲೂಕು ಒಂದರಲ್ಲೇ 24 ಕ್ವಾರಿಗಳು ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅಜ್ಜಪ್ಪನಹಳ್ಳಿ, ಕೌತಮಾರನಹಳ್ಳಿ, ಹಾಲುಗೊಂಡನಹಳ್ಳಿಯಲ್ಲಿ ಒಟ್ಟು 64 ಎಕರೆ ಮೀಸಲು ಅರಣ್ಯ ಪ್ರದೇಶವಿದ್ದು, ಇದರಲ್ಲಿ 24 ಕ್ವಾರಿಗಳಿಗೆ ಅನುಮತಿ ನೀಡಲಾಗಿದೆ.
ಮನುಷ್ಯನ ಸೀಮೋಲ್ಲಂಘನೆಗೆ ಪ್ರಾಣಿಗಳು ಕಂಗಾಲು..
ಇದರ ಪರಿಣಾಮ ವನ್ಯಜೀವಿಗಳು ಕ್ವಾರಿ ಸುತ್ತಮುತ್ತಲಿನ ಗ್ರಾಮಗಳಿಗೆ ಅಲ್ಲದೆ ನಗರಕ್ಕೂ ನುಗ್ಗಿ ಪ್ರಾಣಿ ಮತ್ತು ಮಾನವನ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಕ್ವಾರಿಗಳು ಎಲ್ಲೆಲ್ಲಿವೆ?
ಕೊರಟಗೆರೆಯಲ್ಲಿ 5 ಕ್ವಾರಿಗಳು, ಮಧುಗಿರಿಯಲ್ಲಿ 4 ಕ್ವಾರಿಗಳು ಮೀಸಲು ಅರಣ್ಯ ಪ್ರದೇಶದಲ್ಲಿವೆ. ಕೊರಟಗೆರೆ ತಾಲೂಕಿನ ಜಗನ್ನಾಥಪುರ, ಹೊಲತಾಳು ಮೀಸಲು ಅರಣ್ಯ ಪ್ರದೇಶದಲ್ಲಿ 25 ಎಕರೆ ಪ್ರದೇಶದಲ್ಲಿ 5 ಕ್ವಾರಿಗಳಿಗೆ ಕಲ್ಲುಗಣಿಗಾರಿಕೆಗೆ ಅರಣ್ಯಾಧಿಕಾರಿಗಳೇ ಎನ್‌ಒಸಿ ನೀಡಿದ್ದಾರೆ. ಅದೇ ರೀತಿ ಮಧುಗಿರಿಯ ಗುಟ್ಟೆ ಹಾಗೂ ಬ್ಯಾಲ್ಯದಲ್ಲಿ 12 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ 4 ಕ್ವಾರಿಗಳಿವೆ.
ಉಸ್ತುವಾರಿ ಸಚಿವ ಮಾಧುಸ್ವಾಮಿ ಏನ್ ಹೇಳ್ತಾರೆ?
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರನ್ನು ಕೇಳಿದರೆ, ನಾವು ಈಗ ತನಿಖೆ ಆರಂಭಿಸಿದ್ದು ಅಕ್ರಮ ಗಣಿಗಾರಿಕೆ ತಹಬದಿಗೆ ತರುತ್ತೇವೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: 2013ರ ಎಟಿಎಮ್ ಹಲ್ಲೆ ಪ್ರಕರಣ: ಇಂದು ಅಪರಾಧಿ ಮಧುಕರ್ಗೆ ಶಿಕ್ಷೆ ಪ್ರಮಾಣ ಪ್ರಕಟ