ತುಮಕೂರು: ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ವೀರಭದ್ರಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮಾಜಿ ಶಾಸಕ ಕೆ ಎನ್ ರಾಜಣ್ಣ ನನ್ನ ವಿರುದ್ಧ ಎಂದಿಗೂ ಕೂಡ ಆರೋಪ ಮಾಡಿಲ್ಲ. ಹಾಗಾಗಿ ನಾನು ಅವರ ಬಗ್ಗೆ ಟೀಕಿಸುವುದಿಲ್ಲ ಎಂದಿದ್ದಾರೆ.
ಈ ಮೂಲಕ ತುಮಕೂರು ಜಿಲ್ಲಾ ಜೆಡಿಎಸ್ ಪಕ್ಷದಲ್ಲಿ ಸಾಕಷ್ಟು ತಳಮಳ ಉಂಟಾಗಿದೆ. ಈಗಾಗಲೇ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ ಪಕ್ಷದಿಂದ ಹೊರಗೆ ಬಂದಿದ್ದಾರೆ. ಇದರಿಂದಾಗಿ ಜೆಡಿಎಸ್ಗೆ ಮತ್ತೊಂದು ಆಘಾತ ಎದುರಾದಂತಾಗಿದೆ.
ಮಧುಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನನ್ನ ವೈಯಕ್ತಿಕ ಕಾರಣಗಳಿಂದ ನಾನು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಿಲ್ಲ. ಕೆ ಎನ್ ರಾಜಣ್ಣ ನನ್ನ ಬಗ್ಗೆ ವೈಯಕ್ತಿಕವಾಗಿ ಎಂದು ಕೂಡ ಟೀಕೆ ಮಾಡಿಲ್ಲ. ದೇವೇಗೌಡರ ಬಗ್ಗೆ ಟೀಕೆ ಮಾಡಿದ ಸಂದರ್ಭದಲ್ಲಿ ನಾವೆಲ್ಲರೂ ಮದುಗಿರಿಯಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ್ದೇವೆ.
ಇದನ್ನೂ ಓದಿ: ನಮ್ಮ ಕೈಗೆ ಏನ್ ಸಿಗುತ್ತೋ ಅದನ್ನೇ ಎಸೀತೀವಿ: ಮಾಜಿ ಶಾಸಕ ಕೆ ಎನ್ ರಾಜಣ್ಣ
ಹಿಂದಿನ ಚುನಾವಣೆಯಲ್ಲಿ ಪಕ್ಷದ ಬಗ್ಗೆ ಹಾಗೂ ವರಿಷ್ಠರ ಬಗ್ಗೆ ಟೀಕೆ ಮಾಡಿ ಅದರ ಫಲವನ್ನು ತಿಂದಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಆರೋಗ್ಯ ಸರಿ ಇಲ್ಲ. ಅಲ್ಲದೇ ನಮ್ಮ ಕುಟುಂಬ ವರ್ಗ ಕೂಡ ಈ ರಾಜಕೀಯ ವ್ಯವಸ್ಥೆಯಿಂದ ಹಿಮ್ಮುಖವಾಗಿದೆ. ಹೀಗಾಗಿ ನಾನು ಮುಂದಿನ ಬಾರಿ ಚುನಾವಣೆಯಲ್ಲಿ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.