ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕಾಡರಾಮನಹಳ್ಳಿಯಲ್ಲಿ ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಅರೆಸ್ಟ್ ಮಾಡಿದ್ದಾರೆ. ಮಾಗಡಿ ತಾಲ್ಲೂಕಿನ ಹೊಂಬಾಳಮ್ಮಪೇಟೆಯ ನಿವಾಸಿಗಳಾದ ರಂಗನಾಥ, ರಾಮಕೃಷ್ಣ, ಶಿವಶಂಕರ ಹಾಗೂ ರಂಗನಾಥ ಎಂದು ಆರೋಪಿಗಳನ್ನು ಗುರುತಿಸಲಾಗಿದೆ.
ಆರೋಪಿಗಳು ಕಾಡರಾಮನಹಳ್ಳಿಯ ಜಮೀನೊಂದರಲ್ಲಿ 8 ಬಾವಲಿಗಳನ್ನು ಮಾಂಸಕ್ಕಾಗಿ ಬೇಟೆಯಾಡಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಬಾವಲಿಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಸಾಮಾನ್ಯ ಕಾಗೆಗಳು, ಬಾವಲಿಗಳು ಹಾಗೂ ಇಲಿಗಳನ್ನು ಸಂರಕ್ಷಿತ ಪಟ್ಟಿ 2ರಡಿಯಲ್ಲಿ ತರಲಾಗಿದೆ. ಈ ತಿದ್ದುಪಡಿಯಂತೆ ಸಂರಕ್ಷಿತ ಪಟ್ಟಿಯಡಿಯಲ್ಲಿರುವ ಪ್ರಾಣಿಗಳನ್ನು ಕೊಂದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 25,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ.
ನವಿಲು ಬೇಟೆ-ಒಡಿಶಾ ಮೂಲದ ಮೂವರು ಸೆರೆ: ಮಾಂಸಕ್ಕಾಗಿ ನವಿಲು ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ತುಮಕೂರು ಜಿಲ್ಲೆಯ ಮಾರನಾಯಕಪಾಳ್ಯದಲ್ಲಿ ನಡೆದಿತ್ತು. ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಮೂವರು ಸೆರೆಯಾಗಿದ್ದರು. ಬಂಧಿತರನ್ನು ಬಿಟ್ಟಿಂಗ್ ನಾಯಕ್, ಬೈಷಾಕ್ದಾವು ಮತ್ತು ದುಬಾ ಕಾಪತ್ ಎಂದು ಗುರುತಿಸಲಾಗಿದೆ.
ಕೋತಿಗಳನ್ನು ಕೊಂದು ರಸ್ತೆಬದಿ ಎಸೆದ ಕಿಡಿಗೇಡಿಗಳು: ಕೋತಿಗಳ ಉಪಟಳ ತಾಳಲಾರದೆ ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ಕಟ್ಟಿ ಎಸೆದಿರುವ ಘಟನೆ ರಾಮನಗರ ಜಿಲ್ಲೆಯ ಯಲಚವಾಡಿ ಬಳಿಯ ವಾಸ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿತ್ತು. ರಸ್ತೆಬದಿ ಅನುಮಾನಾಸ್ಪದವಾಗಿ ಗೋಣಿಚೀಲ ಕಂಡು, ಸಾರ್ವಜನಿಕರು ಚೀಲ ತೆರೆದು ನೋಡಿದಾಗ ಅದರೊಳಗೆ ಒಂದು ಮರಿ ಸೇರಿ ಏಳು ಕೋತಿಗಳ ಮೃತದೇಹಗಳಿದ್ದವು. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅರಣ್ಯಾಧಿಕಾರಿಗಳ ನಡೆಗೆ ಆಕ್ರೋಶಗೊಂಡ ಸಾರ್ವಜನಿಕರೇ ಕೊನೆಗೆ ಕೋತಿಗಳ ಮೃತದೇಹಗಳಿಗೆ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಇದನ್ನೂ ಓದಿ: ತುಮಕೂರು: ನವಿಲು ಭೇಟೆಯಾಡಿ ಮಾಂಸ ಭಕ್ಷಣೆ; ಒಡಿಶಾ ಮೂಲದ ಮೂವರ ಬಂಧನ