ತುಮಕೂರು: ಗುಬ್ಬಿ ತಾಲೂಕಿನ ಕಡಬ ಗ್ರಾಮದ ಇತಿಹಾಸಪ್ರಸಿದ್ಧ ದಂಡಿನ ಮಾರಮ್ಮ ದೇವಾಲಯದಲ್ಲಿ ಹುಂಡಿ ಒಡೆದು ಹಣ ಕಳವು ಪ್ರಕರಣ ನಡೆದಿದೆ.
ಕಳ್ಳರು ದೇಗುಲದ ಕಿಟಕಿ ಸರಳುಗಳನ್ನು ಕಟಿಂಗ್ ಮಿಷನ್ ಬಳಸಿ ತುಂಡರಿಸಿದ್ದಾರೆ. ಅಲ್ಲದೆ, ದೇವಾಲಯದ ಆವರಣದಲ್ಲಿಯೇ ವಾಮಾಚಾರ ಮಾಡಿದ್ದು ಕಂಡುಬಂದಿದೆ. ಆ ಬಳಿಕ ಹುಂಡಿಯಲ್ಲಿದ್ದ ಲಕ್ಷಾಂತರ ರೂ. ನಗದು ದೋಚಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ದೇಗುಲದ ಬಲಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕದ್ದೊಯ್ದಿದ್ದಾರೆ.
ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು, ತಾಲೂಕಿನಲ್ಲಿ ನಿರಂತರವಾಗಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಪೊಲೀಸ್ ಇಲಾಖೆ ಅಧಿಕಾರಿಗಳ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದ ಪುರಾತನ ಕಲ್ಯಾಣಿಯ ಜೀರ್ಣೋದ್ದಾರ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, 'ನಾನು ಕೂಡ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಎರಡು ಬಾರಿ ಮಾತನಾಡಿದ್ದೇನೆ. ಗುಬ್ಬಿ ತಾಲೂಕಿಗೆ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ನೇಮಿಸುವುದನ್ನು ಬಿಟ್ಟು ಭ್ರಷ್ಟರನ್ನು ನೇಮಿಸಿದರೆ ಅಪರಾಧ ಪ್ರಕರಣಗಳು ಇನ್ನೆಲ್ಲಿ ಕಡಿಮೆಯಾಗುತ್ತವೆ?' ಎಂದು ಪ್ರಶ್ನಿಸಿದರು.
'ತಾಲೂಕಿನಲ್ಲಿ ಸಾರ್ವಜನಿಕರ ಜೇಬಿಗೆ ಕೈ ಹಾಕಿ ಹಣಪೀಕುವ ಪೊಲೀಸ್ ಸಿಬ್ಬಂದಿ ಬಗ್ಗೆ ಕ್ರಮವಹಿಸುವಂತೆ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ. ಅಲ್ಲದೆ, ಈ ಬಗ್ಗೆ ಸಿಪಿಐ ಮತ್ತು ಪಿಎಸ್‌ಐ ಅವರಿಗೂ ಈಗಾಗಲೇ ಎರಡು ಬಾರಿ ಎಚ್ಚರಿಸಿದ್ದೇನೆ. ಮತ್ತೆ ದೂರುಗಳು ಕೇಳಿ ಬಂದಲ್ಲಿ ಠಾಣೆಯ ಮುಂದೆ ಖುದ್ದು ನಾನೇ ಪ್ರತಿಭಟನೆ ನಡೆಸುತ್ತೇನೆ' ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಿಷೇಧದ ನಡುವೆಯೂ ಪಿಒಪಿ ಗಣಪನ ಮಾರಾಟ