ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಮುಖ್ಯವಾಗಿ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಅಂತಾ ಗೃಹ ಸಚಿವರು ತಿಳಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಮೃತದೇಹಗಳ ಅಂತಿಮ ದರ್ಶನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೃತಪಟ್ಟಿರುವ ಕುಟುಂಬದ ಯಜಮಾನ ಗರೀಬ್ ಸಾಬ್ ಎಂಬವರು ಶಿರಾದಿಂದ ತುಮಕೂರು ನಗರಕ್ಕೆ ವಲಸೆ ಬಂದಿದ್ದರು. ತುಮಕೂರು ನಗರದಲ್ಲಿ ಚಿಕನ್ ಕಬಾಬ್ ಸೆಂಟರ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೆ ವ್ಯಾಪಾರ ವಹಿವಾಟಿಗಾಗಿ ಒಂದೂವರೆ ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರೂ. ಅಲ್ಲದೆ ಪ್ರತಿ ತಿಂಗಳು ಬಡ್ಡಿ ಹಣವನ್ನು ಕಟ್ಟುತ್ತಿದ್ದರು. ಆದರೆ ಇವರ ವ್ಯಾಪಾರದಲ್ಲಿ ಹಿನ್ನಡೆ ಆಗಿದ್ದರಿಂದ ಬಡ್ಡಿ ಹಣವನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಬಡ್ಡಿ ದಂಧೆಕೋರರು ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ ಎಂದು ಗೃಹ ಸಚಿವರು ಹೇಳಿದರು.
ಡೆತ್ ನೋಟ್ನಲ್ಲಿ ಗರೀಬ್ ಸಾಬ್ ಅವರು ಬರೆದಿಟ್ಟಿರುವ ಆರೋಪಿಗಳ ಹೆಸರನ್ನು ಪರಿಶೀಲಿಸಲಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ರೀತಿ ಬಡ್ಡಿ ವ್ಯವಹಾರ ಹಾಗೂ ಬಡ್ಡಿ ದಂಧೆಕೋರರಿಂದ ಒಂದು ಕುಟುಂಬವೇ ಪ್ರಾಣ ಕಳೆದುಕೊಂಡಿರುವುದು ಆತಂಕ ಹುಟ್ಟಿಸಿದೆ. ಹೀಗಾಗಿ ಈ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಪೂರಕ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಮುಖ್ಯಮಂತ್ರಿಗೆ ತಿಳಿಸಿ ಆದೇಶದಂತೆ ಪರಿಹಾರ ನೀಡುತ್ತೇವೆ. ಬಡ್ಡಿ ವ್ಯವಹಾರ ಇದೆ ಎಂದು ಜನರು ಮಾತನಾಡುತ್ತಾರೆ. ಅದನ್ನು ಗಂಭೀರವಾಗಿ ತೆಗದುಕೊಂಡು ಬಡ್ಡಿ ವ್ಯವಹಾರವನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಆತ್ಮಹತ್ಯೆಯ ಗಂಭೀರತೆ ಗೊತ್ತಿಲ್ಲ. ತನಿಖೆಯ ನಂತರ ನಿಖರ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಕಡಿಮೆ ಹಣಕ್ಕೆ ಐದು ಜನ ಸಾಯುವುದು ಸಾಮಾನ್ಯ ಅಲ್ಲ. ತನಿಖೆಯ ನಂತರ ನಿಜ ಸ್ಥಿತಿ ತಿಳಿಯಲಿದೆ ಎಂದು ಗೃಹ ಸಚಿವರು ಹೇಳಿದರು.
ಮೀಟರ್ ಬಡ್ಡಿ ಮಾಡುವವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು ಜಾಸ್ತಿಯಾಗಿದೆ. ತನಿಖೆಯ ನಂತರ ಎಲ್ಲ ವಿಚಾರಗಳು ಬಯಲಿಗೆ ಬರಲಿವೆ. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿವೆ ಎಂಬ ಆರೋಪಗಳು ಪ್ರತಿಪಕ್ಷದವರಿಂದ ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ನನ್ನ ಗಮನಕ್ಕೆ ಬಂದಿಲ್ಲ. ಅಂತಹದು ಏನಾದರೂ ಇದ್ದರೆ, ಗಮನಕ್ಕೆ ತಂದರೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಓದಿ: ಸಾಲಬಾಧೆ, ಕಿರುಕುಳ ಆರೋಪ; ತುಮಕೂರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ