ತುಮಕೂರು: ಕುಣಿಗಲ್ ತಾಲೂಕಿನ ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರಿಗೆ ತುಮಕೂರು ಜಿಲ್ಲಾ ಪಂಚಾಯತಿ ಆವರಣದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಸಚಿವದ್ವಯರು ಸೇರಿದಂತೆ ನೆರೆದಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.
ಕುಣಿಗಲ್ ತಾಲೂಕಿನ ಆಶಾ ಎಂಬ ಮಹಿಳೆಯ ಕೀಲು ಡಿಸ್‌ಲೊಕೇಟ್ ಆಗಿತ್ತು. ಕುಂದೂರು ತಾಲೂಕಿನ ಇವರಿಗೆ ಅವರಿಗೆ ಶಸ್ತ್ರಚಿಕಿತ್ಸೆಗೆ 5-6 ಲಕ್ಷ ರೂ ಖರ್ಚಾಗುತ್ತಿತ್ತು. ಈ ಬಗ್ಗೆ ಶಾಸಕರ ಬಳಿ ಬಂದು ನೋವು ತೋಡಿಕೊಂಡಿದ್ದರು. ತಕ್ಷಣ ನೆರವಿಗೆ ಬಂದ ಶಾಸಕ ರಂಗನಾಥ್, ಮಹಿಳೆಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಇದು ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು.
ಹೀಗಾಗಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇದನ್ನು ಪ್ರಸ್ತಾಪಿಸಿ, ಸರ್ಕಾರದ ಪರವಾಗಿ ಹಾಗೂ ಸಭೆಯಲ್ಲಿರುವ ಎಲ್ಲರ ಪರವಾಗಿ ರಂಗನಾಥ್ ಅವರನ್ನು ಅಭಿನಂದಿಸಿದರು. ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಂಸದ ಬಸವರಾಜ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ರೈತನ ತಡೆದ ಪೊಲೀಸರು: ಶಿರಾ ಮೂಲದ ರೈತನೊಬ್ಬ ಗೃಹ ಸಚಿವ ಪರಮೇಶ್ವರ್ ಅವರಿಗೆ ಅರ್ಜಿ ಕೊಡಲು ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಗೆ ಹೋಗಲು ಯತ್ನಿಸಿದ್ದು, ಪೊಲೀಸರು ತಡೆದ ಘಟನೆ ನಡೆಯಿತು. ನನಗೆ ನ್ಯಾಯ ಬೇಕೆಂದು ಬಂದಿದ್ದ ರೈತ, ತಮ್ಮ ಜಮೀನಿನಲ್ಲಿ ವಿದ್ಯುತ್ ಹೈಟೆನ್ಷನ್ ಲೈನ್ ಹಾದು ಹೋಗಿದೆ. ಇದಕ್ಕೆ ಹಲವು ವರ್ಷಗಳಿಂದ ಸೂಕ್ತ ಪರಿಹಾರ ಕೇಳಿದರೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಕುಣಿಗಲ್ ಶಾಸಕ ಡಾ.ರಂಗನಾಥ್ ಅವರಿಂದ ಬಡ ಮಹಿಳೆಗೆ ಉಚಿತ ಶಸ್ತ್ರಚಿಕಿತ್ಸೆ: ವಿಡಿಯೋ