ತುಮಕೂರು/ಪಾವಗಡ: ಕೆಲಸವನ್ನರಸಿ ಇದ್ದಿಲು ಸುಡಲು ಬಂದಿದ್ದ ವಲಸೆ ಕಾರ್ಮಿಕರಿಗೆ ಪಾವಗಡ ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ಪಡಿತರ ವಿತರಿಸಲಾಗುತ್ತಿದೆ.
ತಾಲೂಕಿನ 50 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪೊನ್ನಸಮುದ್ರ, ಜೆ.ಅಚ್ಚಮ್ಮನಹಳ್ಳಿ , ಚಿಕ್ಕಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಕಾರ್ಮಿಕರಿಗೆ ಪಡಿತರ ವಿತರಣೆ ಮಾಡುತ್ತಿದ್ದು, ಮಕ್ಕಳಿಗೆ ತಿನ್ನಲು ಬಿಸ್ಕತ್ತು, ಸ್ವೀಟ್ಸ್ ವಿತರಿಸಲಾಗಿದೆ. ಜಪಾನಂದ ಸ್ವಾಮೀಜಿಯವರೊಂದಿಗೆ ಮೂವರು ನ್ಯಾಯಾಧೀಶರು ಹಾಗೂ ಎಪಿಪಿ ಜೊತೆಗೂಡಿ ಲಾಕ್ಡೌನ್ ಆರಂಭವಾದಾಗಿನಿಂದಲೂ ನಿರಂತರವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ಹಿರಿಯ ನ್ಯಾಯಾಧೀಶರಾದ ಹನುಮಂತಪ್ಪ ತಿಳಿಸಿದರು.
ನ್ಯಾಯಾಧೀಶರಾದ ಭರತ್ ಯೋಗೀಶ್ ಕರಗುದರಿ ಮಾತನಾಡಿ, ನಾವು ನಮ್ಮ ಪಕ್ಕದಲ್ಲಿ ಅವಿದ್ಯಾವಂತ ಇದ್ದಾನೆ ಎಂದರೆ ಅವರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಶಾಲೆಯಲ್ಲೀಗ ಬಿಸಿಯೂಟದೊಂದಿಗೆ ಹಲವು ಸೌಲಭ್ಯಗಳಿದ್ದು, ಇಂತಹವರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕೆಂದರು.
ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಮಾತನಾಡಿ, ಪಾವಗಡ ಕಾನೂನು ಸೇವಾ ಪ್ರಾಧಿಕಾರದ ಮೂರು ಜನ ನ್ಯಾಯಾಧೀಶರು, ಇಲ್ಲಿ ನಾವು ನೀಡಿದ ಪಡಿತರಕ್ಕೆ ಎಲ್ಲಿಲ್ಲದ ಸಂತಸ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರು ಕೂಡಾ ಇವರನ್ನು ಗಮನಿಸುತ್ತಿಲ್ಲ, ಆದರೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಸಹಕಾರದಿಂದ ಎರಡನೇ ಹಂತವಾಗಿ ಪಡಿತರ ವಿತರಣೆಯಾಗುತ್ತಿದ್ದು, ಈ ಸೇವೆ ನಿರಂತರವಾಗಿ ನಡೆಯಲಿದೆ ಎಂದರು.