ತುಮಕೂರು: ಹೃದಯಾಘಾತ ಸೇರಿದಂತೆ ಕೋವಿಡೇತರ ಕಾರಣಗಳಿಂದ ಮೃತಪಟ್ಟವರ ಮೃತದೇಹಗಳನ್ನು ಕುಟುಂಬಸ್ಥರಿಗೆ ವಿಳಂಬ ಮಾಡದೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಕೋವಿಡ್ಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸೋಂಕಿತರಿಗೆ ತಾಜಾ ಆಹಾರ ಸೇರಿದಂತೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.
ವೈದ್ಯಕೀಯ ಸೌಲಭ್ಯ/ ಆಸ್ಪತ್ರೆಗಳು ಹತ್ತಿರ ಇರುವ ಹಾಗೂ ಸೌಕರ್ಯವಿರುವ ಸೋಂಕಿತರು ಬಯಸಿದ್ದಲ್ಲಿ ಹೋಮ್ ಐಸೊಲೇಷನ್‍ಗೆ ಅವಕಾಶ ನೀಡಿ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 144 ಸರ್ಕಾರಿ ಆಸ್ಪತ್ರೆಗಳು ಇದ್ದು, ರ‍್ಯಾಪಿಡ್ ಆ್ಯಂಟಿಜಿನ್ ಟೆಸ್ಟ್ಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ರೋಗಲಕ್ಷಣವನ್ನು ಆರಂಭದಲ್ಲಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಸೋಂಕು ಕಂಡು ಬಂದ ರೋಗಿಗಳಿಗೆ ಹೆಚ್ಚಿನ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಸೋಂಕಿತರು ತಡವಾಗಿ ಆಸ್ಪತ್ರೆಗಳಿಗೆ ಬರುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಆಗಿರುವ ಹೆಚ್ಚಿನ ಕೊರೊನಾ ಸಾವಿನ ಪ್ರಕರಣಗಳು ಆಸ್ಪತ್ರೆಗೆ ವಿಳಂಬವಾಗಿ ಬಂದವರದ್ದಾಗಿವೆ. ಸೋಂಕಿತ ಲಕ್ಷಣಗಳು ಕಂಡು ಬಂದ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆದರೆ ಸಾವಿನ ಸಂಖ್ಯೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ದಾಖಲಾತಿ ಸಂಬಂಧ ಕಂಟ್ರೋಲ್ ರೂಮ್ನನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು. ಶಿರಾ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವುದರಿಂದ ಶಿರಾ ಕೆರೆಗೆ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಮಾವತಿ ನಾಲಾ ಇಂಜಿನಿಯರ್ಗಳಿಗೆ ಸೂಚನೆ ನೀಡಿದರು.