ತುಮಕೂರು: ವರಮಹಾಲಕ್ಷ್ಮೀ ಹಬ್ಬ ಅಂದಾಕ್ಷಣ ಭಕ್ತರಿಗೆ ನೆನಪಿಗೆ ಬರೋದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ. ಲಕ್ಷ್ಮಿ ಕೃಪಾಕಟಾಕ್ಷಕ್ಕಾಗಿ ಸಾವಿರಾರು ಭಕ್ತರು ಪ್ರತಿ ವರ್ಷ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಹಬ್ಬದಂದು ರಾಜ್ಯವಲ್ಲದೆ ಹೊರ ರಾಜ್ಯದ ಆಂಧ್ರ, ತಮಿಳುನಾಡಿನಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಮಹಾಲಕ್ಷ್ಮಿ ಹೋಮ, ಹವನ ನಡೆಯಲಿದೆ. ಇದಕ್ಕೂ ಮೊದಲು ಬೆಳಗ್ಗೆ 6.30ರಿಂದ 8.30ವರೆಗೆ ಪಂಚಾಮೃತ ಅಭಿಷೇಕ ಮಾಡಲಾಗುವುದು. ಬೆಳಗ್ಗೆ 9ರಿಂದ 11ರವರೆಗೆ ಶ್ರೀ ಮಹಾಲಕ್ಷ್ಮಿ ಹೋಮ ಆಯೋಜಿಸಲಾಗಿದೆ. ನಂತರ ಮಹಾಲಕ್ಷ್ಮಿ ಮೂರ್ತಿಗೆ ಅಭಿಷೇಕ, ಅಷ್ಟೋತ್ತರ ಸಹಸ್ರ ಪೂಜೆಗಳು, ಅಷ್ಟಾವಧಾನ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಧರ್ಮಸ್ಥಳ, ಚಿಕ್ಕಮಗಳೂರು, ಹೊರನಾಡು, ಶೃಂಗೇರಿ, ಕಟೀಲು ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಭಕ್ತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವರಮಹಾಲಕ್ಷ್ಮಿ ಹಬ್ಬದಂದು ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಕ್ಕೆ ಆಗಮಿಸುವ ಸಾಧ್ಯತೆಗಳಿದೆ ಎಂದು ದೇಗುಲದ ಮೇಲುಸ್ತುವಾರಿ ವಹಿಸಿಕೊಂಡಿರುವ ರಮೇಶ್ ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಗೊರವನಹಳ್ಳಿಗೆ ಬರಲು ಸಾರಿಗೆ ವ್ಯವಸ್ಥೆ ಕೂಡ ಮಾಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದಂದು ವೃದ್ಧರಿಗೆ, ಅಸಹಾಯಕ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗಿದೆ. ಸಾವಿರಾರು ಮಂದಿ ಭಕ್ತರು ದೇಗುಲಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ 70 ಮಂದಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.