ತುಮಕೂರು: ನಾಳೆ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಪೂಜೆ ಪುನಸ್ಕಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕೇವಲ ಅರ್ಚಕರು ಮಾತ್ರ ಪೂಜೆ ಮಾಡಲಿದ್ದು, ಭಕ್ತಾದಿಗಳು ಯಾರೂ ಬರಬೇಡಿ ಎಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮೀ ದೇವಾಲಯದಲ್ಲಿ ಇವತ್ತಿನಿಂದಲೇ ಬರುವಂತ ಭಕ್ತರಿಗೆ ನಾಳೆ ಯಾರೂ ಬರಬೇಡಿ ಎಂದು ಹೇಳಲಾಗಿದೆ. ಇಂದು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಯಾವುದೇ ರೀತಿಯ ಪೂಜೆ, ಹೋಮ ಹವನ, ಅಲಂಕಾರ, ಅಭಿಷೇಕಗಳಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿತ್ತು.
ಮೂರನೇ ಅಲೆ ಭೀತಿ:
ಕೋವಿಡ್ ಮೂರನೇ ಅಲೆ ತಡೆಯುವ ದೃಷ್ಟಿಯಿಂದ ಜಿಲ್ಲಾದ್ಯಂತ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ನಿಷೇಧ ಹೇರಲಾಗಿದೆ. ಇನ್ನು ನಾಳೆ ಬಂದ್ ಎಂಬ ವಿಚಾರ ತಿಳಿದು ಇಂದೇ ಕೆಲ ಭಕ್ತರು ದೇವಾಲಯಕ್ಕೆ ಬಂದು ಲಕ್ಷ್ಮಿದೇವಿಯ ದರುಶನ ಪಡೆದರು. ದೇವಾಲಯದ ಮುಂದೆ ಜಿಲ್ಲಾಡಳಿತದ ಆದೇಶ ಪತ್ರ ಅಂಟಿಸಿ ಭಕ್ತರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಊರತುಂಬಾ ಡಂಗೂರ ಹೊಡೆಸಿ ಯಾರೂ ಅಂಗಡಿ ಮುಂಗಟ್ಟುಗಳನ್ನು ತೆಗೆಯಬಾರದು ಎಂದು ಸ್ಥಳೀಯ ವರ್ತಕರಿಗೆ ಹಾಗೂ ಊರಿನ ಜನರಿಗೆ ಮಾಹಿತಿ ನೀಡಲಾಗಿದೆ.
ಪೂಜೆಯನ್ನೂ ರದ್ದು ಮಾಡಿರುವುದರಿಂದ ಭಕ್ತರು ಹೂ, ಹಣ್ಣು ಕಾಯಿ ತರದೇ ಮಡಿಲಕ್ಕಿ, ಬೆಲ್ಲವನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಿ ಹೋಗುತ್ತಿದ್ದಾರೆ. ನಾಳೆ ದೇವಾಲಯ ಸಂಪೂರ್ಣ ಬಂದ್ ಇರುವುದರಿಂದ ಇಂದು ಸಂಜೆ 7ಗಂಟೆಗೆ ಬಾಗಿಲು ಹಾಕಿದ್ದು, ನಾಳೆ ಬೆಳಗ್ಗೆ 5ಗಂಟೆಗೆ ಕೇವಲ ಅರ್ಚಕರು ಮಾತ್ರ ದೇವಾಲಯದಲ್ಲಿ ಪೂಜೆ ಮಾಡಿ ಮುಂಜಾನೆ 5.30ರ ಒಳಗೆ ಪುನಃ ಬಾಗಿಲು ಹಾಕಲಿದ್ದಾರೆ. ಶುಕ್ರವಾರ, ಶನಿವಾರ, ಭಾನುವಾರ ಹಾಗೂ ಸೋಮವಾರ ನಾಲ್ಕು ದಿನಗಳ ಕಾಲ ದೇವಾಲಯಕ್ಕೆ ಪ್ರವೇಶ ನಿರ್ಬಂಧವಿದೆ. ಭಕ್ತರು ಮಂಗಳವಾರವಷ್ಟೇ ದೇವಾಲಯಕ್ಕೆ ಬರಬಹುದಾಗಿದೆ.
ಇದನ್ನೂ ಓದಿ: ಎರಡು ಮದುವೆಯಾಗಿದ್ದವಳ ಜೊತೆ ಲವ್ವಿ ಡವ್ವಿ: ಮತ್ತೊಬ್ಬನ ಜೊತೆ ರಂಗಿನಾಟ ಆಡಿದ್ದಕ್ಕೆ ಯುವಕ ಆತ್ಮಹತ್ಯೆ