ತುಮಕೂರು: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಲಕ್ಷಾಂತರ ರೂ ಸುಲಿಗೆ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ತುಮಕೂರು ನಗರದ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಸದಾಶಿವನಗರದ ಅಲಿ ಹುಸೇನ್, ಶಾನ್ವಾಜ್ ಪಾಷ, ಬೆಂಗಳೂರಿನ ಯಶವಂತಪುರದ ಮೆಹಬೂಬ್ ಕಾನ್, ತುಮಕೂರಿನ ಪಿಹೆಚ್ ಕಾಲೋನಿಯ ಸೈಯದ್ ಶವರ್ ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಇಮ್ರಾನ್ ಪರಾರಿಯಾಗಿದ್ದಾನೆ.
ನಗರದ ಮಂಡಿಪೇಟೆ ಆಯಿಲ್ ಉದ್ಯಮಿಯೊಬ್ಬರಿಗೆ ಆಗಸ್ಟ್ 8 ರಂದು ಮೊಬೈಲ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಪ್ ಸಂದೇಶ ಮತ್ತು ವಾಟ್ಸಪ್ ಕರೆಗಳ ಮೂಲಕ ಬೆದರಿಕೆ ಹಾಕಿದ್ದನು. ಒಂದು ವಾರದ ಹಿಂದೆ ನಿಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದನು ಮರೆತುಬಿಟ್ಟಿದ್ದೀರಾ, ಅದು ಕೇವಲ ಸ್ಯಾಂಪಲ್ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಧಮಕಿ ಹಾಕಿದ್ದನು. ಅಲ್ಲದೆ ಆಗಸ್ಟ್ 10ರಂದು ಮಂಡಿ ಪೇಟೆಯ ಮತ್ತೊಬ್ಬ ಆಯಿಲ್ ಉದ್ಯಮಿಗೆ ಇದೇ ರೀತಿಯ ಬೆದರಿಕೆ ಸಂದೇಶವನ್ನು ಕಳುಹಿಸಿ 50ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು.
ಜುಲೈ 9ರಂದು ಮಂಡಿಪೇಟೆಯ ಮತ್ತೊಬ್ಬ ಉದ್ಯಮಿಯ ಮೇಲೆ ವಾಲ್ಮೀಕಿ ನಗರದ ಅವರ ಮನೆಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಮೂರು ಪ್ರಕರಣಗಳನ್ನು ಪತ್ತೆ ಹಚ್ಚಲು ತುಮಕೂರು ಸರ್ಕಲ್ ಇನ್ಸ್ಪೆಕ್ಟರ್ ನವೀನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಅಂತಿಮವಾಗಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ವಿಶೇಷ ತಂಡವು ಆರೋಪಿಗಳಿಂದ ಆರು ಮೊಬೈಲ್, ಮತ್ತು ಸಿಮ್ಗಳು, ಒಂದು ಆಟೋರಿಕ್ಷಾ, ಒಂದು ಬೈಕ್, ಒಂದು ಮಚ್ಚು ವಶಪಡಿಸಿಕೊಂಡಿದೆ.