ತುಮಕೂರು: ನಾನು ಈ ಹಿಂದೆಯೂ ಸಹ ಸಿದ್ದರಾಮಯ್ಯನವರಿಗೆ ಮಧುಗಿರಿಯಿಂದ ಸ್ಪರ್ಧೆ ಮಾಡಿ ಅಂತ ಮನವಿ ಮಾಡಿದ್ದೆ. ನಮ್ಮ ಮಧುಗಿರಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯಗಳನ್ನು ಅವರ ಗಮನಕ್ಕೂ ತಂದಿದ್ದೆ. ಇದೀಗ ಕೆಲಗೊಂದಲ ಸೃಷ್ಟಿಯಾಗಿದ್ದರಿಂದ ಸಿದ್ದರಾಮಯ್ಯ ಅವರನ್ನು ಇಲ್ಲಿಯೇ ಸ್ಪರ್ಧಿಸುವಂತೆ ಮತ್ತೆ ಮನವಿ ಮಾಡುವೆ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ತಿಳಿಸಿದ್ದಾರೆ. ತುಮಕೂರಿನಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಧುಗಿರಿ ಕ್ಷೇತ್ರದಲ್ಲಿಯೇ ಸ್ಪರ್ಧೆ ಮಾಡಿದರೆ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲು ಸಹಾಯ ಆಗುತ್ತೆ. ಈ ಬಗ್ಗೆ ಅವರ ಗಮನಕ್ಕೂ ತಂದಿದ್ದೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಮಧುಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿಕ್ಕೆ ಅನುಮತಿ ಕೊಡಬೇಕು ಎಂದು ಮಾಧ್ಯಮದ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡುವೆ. ಅದರ ಜೊತೆಗೆ ಸಿದ್ದರಾಮಯ್ಯ ಅವರಿಗೂ ನಾನು ಕೇಳಿಕೊಳ್ಳುವೆ ಎಂದರು.
ಮಧುಗಿರಿ ಕ್ಷೇತ್ರ ಉತ್ತಮವಾದ ಕ್ಷೇತ್ರವಾಗಲಿದೆ: ಮಧುಗಿರಿ ಕ್ಷೇತ್ರಕ್ಕೆ ಬರಬೇಕು. ನೀವು ಬಂದ್ರೆ ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳನ್ನು ಗೆಲ್ಲೋಕೆ ಸಹಕಾರಿ ಆಗುತ್ತೆ. ಕ್ಷೇತ್ರ ಬಹಳ ದೂರ ಇಲ್ಲ. ಬೆಂಗಳೂರಿನಿಂದ ಕೇವಲ 70 ರಿಂದ 100 ಕಿ.ಮೀ ಇದೆ. ಕೋಲಾರದಷ್ಟೇ ದೂರ. ಅದರಿಂದ ಕ್ಷೇತ್ರ ಉತ್ತಮವಾದ ಕ್ಷೇತ್ರವಾಗಲಿದೆ. ಹೀಗಾಗಿ ಆಯ್ಕೆ ಮಾಡ್ಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಾಯಿ ಮಾತಿಗೆ ಹೇಳಿಕೆ ನೀಡಬಾರದು. ಹೇಳಿಕೆ ಕೊಡುವವರು ಅವರ ಜಿಲ್ಲೆ ಹಾಗೂ ತಾಲೂಕು ಬಿಟ್ಟು, ರಾಜ್ಯದ ಬೇರೆ ಭಾಗದಲ್ಲಿ ಹೋಗಿ ಸ್ಪರ್ಧೆ ಮಾಡಿ ಗೆದ್ದು ಬರ್ಲಿ ನೋಡೋಣ. ಆ ಶಕ್ತಿ ಇರೋದು ಸಿದ್ದರಾಮಯ್ಯ ಅವರಿಗೆ ಒಬ್ಬರಿಗೆ ಮಾತ್ರ ಎಂದು ಹೇಳಿದರು. ಕರ್ನಾಟಕದ ಉತ್ತರ ಭಾಗದಲ್ಲಿ ಹೋಗಿ ಸ್ಪರ್ಧೆ ಮಾಡಿ ಗೆದ್ದು ಬಂದವರು ಸಿದ್ದರಾಮಯ್ಯ ಮಾತ್ರ. ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಇದ್ದಹಾಗೆ ಆಂಧ್ರದಲ್ಲಿ ಎನ್ಟಿಆರ್ ಮಾತ್ರ ಎಂದರು.
ಗೆಲ್ಲುವ ಸಾಮರ್ಥ್ಯ ಇದೆ: ಎನ್ಟಿಆರ್ ಸಹ ಮೂರು ಬಾರಿ ಒಮ್ಮೆಲೆ ಸ್ಪರ್ಧೆ ಮಾಡಿದ್ರು. ಮೂರು ಭಾಗದಲ್ಲಿಯೂ ಗೆದ್ದು ಹಿಂದೂಪುರ ಒಂದು ಉಳಿಸಿಕೊಂಡು ಮಿಕ್ಕಿದ್ದೆಲ್ಲಾ ಕಡೆ ರಾಜೀನಾಮೆ ಕೊಟ್ರು. ಹಾಗಾಗಿ ಅಂತಹ ಶಕ್ತಿ ಇರೋದು ಮತ್ತು ರಾಜ್ಯದಲ್ಲಿ ಯಾವ ಭಾಗದಲ್ಲಾದರೂ ಸ್ಪರ್ಧೆ ಮಾಡಿ ಗೆಲ್ಲುವವರೆಂದರೆ ಸಿದ್ದರಾಮಯ್ಯ ಮಾತ್ರ ಎಂದು ಹೇಳಿದರು.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲಿ ಬೇಕಾದ್ರು ಸ್ಪರ್ಧೆ ಮಾಡಿ, ಗೆಲ್ಲುವಂತಹ ಜನಪ್ರಿಯ ಇರುವಂತಹ ನಾಯಕ ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯ ವಿರುದ್ಧ ಮಾತನಾಡಿದೋರೆಲ್ಲಾ ಒಂದು ತರ ಅಪಹಾಸ್ಯಕ್ಕೆ ಒಳಗಾಗ್ತಾರೆ ಅಷ್ಟೇ. ನಾವು ಹೇಳೋ ಕ್ಷೇತ್ರದಲ್ಲಿ ಇವರುಗಳು ನಿಂತು ಗೆದ್ದು ಬರ್ಲಿ ನೋಡೋಣ ಎಂದರು.
ಬಳ್ಳಾರಿಯಿಂದ ಆಹ್ವಾನ : ಇನ್ನೊಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬಳ್ಳಾರಿಯಿಂದ ಸ್ಪರ್ಧಿಸುವಂತೆ ಮಾಜಿ ಸಚಿವ ದಿವಾಕರ್ ಬಾಬು ಆಹ್ವಾನ ನೀಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಹಾಗೆಯೇ ಇದೆ. ಇಲ್ಲಿ ದೊಡ್ಡವರು ಬಂದರೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತದೆ. ಮಿತ್ತಲ್, ಬ್ರಹ್ಮಿಣಿ ವಶಪಡಿಸಿಕೊಂಡ ಭೂಮಿಯಲ್ಲಿ ಏನೂ ಅಭಿವೃದ್ಧಿ ಆಗಿಲ್ಲ. ಈ ಹಿಂದೆ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರಿಂದ ಜಿಲ್ಲೆ ಅಭಿವೃದ್ಧಿ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳು ಬಹಳ ಇದ್ದಾರೆ. ಗೆಲ್ಲುವ ವಾತಾವರಣವಿರುವುದರಿಂದ ಎಲ್ಲರೂ ಪಕ್ಷದ ಟಿಕೆಟ್ ಕೇಳುತ್ತಿದ್ದಾರೆ ಎಂದರು.
ತಮ್ಮ ಪುತ್ರನಿಗೆ ವರುಣಾ ಕ್ಷೇತ್ರವನ್ನು ನೀಡಿರುವ ಸಿದ್ಧರಾಮಯ್ಯ ಸ್ಪರ್ಧಿಸಲು ಕ್ಷೇತ್ರಗಳು ಇಲ್ಲವೆಂಬ ಭಾವನೆ ಬೇಡ. ಅಭಿವೃದ್ಧಿಗಾಗಿ ಇಲ್ಲಿಗೆ ಬರಲು ಕೇಳುತ್ತಿದ್ದೇವೆ. ನನಗೆ ಟಿಕೆಟ್ ಖಾಯಂ ಅಂತ ಹೇಳಿದ ಮೇಲೂ ಸಿದ್ದರಾಮಯ್ಯ ಅವರನ್ನು ಬಳ್ಳಾರಿಗೆ ಕರೆಯುತ್ತಿದ್ದೇವೆ. ಈಗಾಗಲೇ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಬಾದಾಮಿಯಲ್ಲಿ ಸಿದ್ದರಾಮಯ್ಯ ಅದ್ಧೂರಿ ರೋಡ್ ಶೋ... ಬೃಹತ್ ಹಾರ ಹಾಕಿ ಸ್ವಾಗತಿಸಿದ ಬೆಂಬಲಿಗರು