ತುಮಕೂರು: ಬೇರೆ ಸಮುದಾಯಗಳಿಗೆ ಹೋಲಿಸಿದರೆ ಒಕ್ಕಲಿಗ ಸಮುದಾಯ ಸಂಘಟನೆಯಲ್ಲಿ ನಿದ್ರಿಸುತ್ತಿದೆ ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ತಮ್ಮ ಸಮುದಾಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕುಂಚಟಿಗ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯಿಂದ 11ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿನ ಬೇರೆ ಸಮಾಜಕ್ಕೆ ಹೋಲಿಸಿದರೆ ಒಕ್ಕಲಿಗ ಸಮಾಜ ಸಂಘಟನೆಯಲ್ಲಿ ಹಿಂದೆ ಉಳಿದಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಧ್ವನಿಯಾಗಿ ನಿಲ್ಲುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಬೇರೆ ಸಮುದಾಯದ ನಾಯಕರಿಗೆ ಈ ರೀತಿ ಅನ್ಯಾಯವಾಗಿದ್ದರೆ ಸುಮ್ಮನೆ ಕೂರುತಿರಲಿಲ್ಲ. ನಮ್ಮ ನಡುವಳಿಕೆ, ಬೆಳವಣಿಗೆ, ಚಿಂತನೆ, ವ್ಯಕ್ತಿತ್ವ ಇಬ್ಭಾಗವಾಗಿದೆ ಎಂದು ವಿಷಾದಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ರಾಜಕೀಯದಿಂದ ನಿರ್ನಾಮ ಮಾಡಲು ಹುನ್ನಾರ ನಡೆಸುತ್ತಿದೆ. ನಾವೆಲ್ಲರೂ ಡಿಕೆಶಿ ಪರ ಧ್ವನಿ ಎತ್ತಬೇಕು. ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರು ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕಿದೆ. ಆ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಆಗಬೇಕಿದೆ ಎಂದರು.
ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಒಕ್ಕಲಿಗ ಸಮಾಜಕ್ಕೆ ಗಂಡಾಂತರ ಎದುರಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಸೋಲಿನಿಂದ ಒಕ್ಕಲಿಗ ಸಮುದಾಯಕ್ಕೆ ಹೊಡೆತವಾಗಿದೆ ಎಂದರು.
ನಂತರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.