ತುಮಕೂರು: ಡಿಡಿಪಿಐ ಕಚೇರಿಯಲ್ಲಿ ಪತ್ರಾಂಕಿತರಾಗಿ ಕಾರ್ಯ ನಿರ್ವಹಿಸುತ್ತಿರುವ ಅನಂತರಾಮು ಅವರ ಸೇವೆ ಗುರುತಿಸಿ ಜಿಲ್ಲಾ ಪಂಚಾಯತ್ನಲ್ಲಿ ಸನ್ಮಾನಿಸುವ ವಿಷಯದಲ್ಲಿ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ಹಾಗೂ ಜಿ.ಪಂ. ಸದಸ್ಯ ವೈ.ಹೆಚ್. ಹುಚ್ಚಯ್ಯ ನಡುವೆ ಮಾತಿನ ಚಕಮಕಿ ನಡೆಯಿತು.
ನಿನ್ನೆ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಕರೆದ ವಿಶೇಷ ಸಭೆ ಕೋರಂ ಇಲ್ಲದ ಕಾರಣ 12 ಗಂಟೆಯಾದರೂ ಆರಂಭವಾಗಲಿಲ್ಲ, ಜಿಲ್ಲಾ ಪಂಚಾಯತ್ ಸದಸ್ಯ ವೈ.ಹೆಚ್ ಹುಚ್ಚಯ್ಯ ಕಾಲಹರಣ ಮಾಡುವುದು ಬೇಡ ಸಭೆ ಪ್ರಾರಂಭಿಸಿ, ಆನಂತರದಲ್ಲಿ ಸದಸ್ಯರು ಹಾಜರಾಗುತ್ತಾರೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜಿ.ಪಂ. ಸದಸ್ಯ ಪಾಪಣ್ಣ ಕೋರಂ ಇಲ್ಲದೇ ಸಭೆ ಪ್ರಾರಂಭಿಸುವುದು ಸೂಕ್ತ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಸಭಾಂಗಣದಿಂದ ಹೊರ ನಡೆದರು. ಇನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕೂಡ ಯಾವುದೇ ಉತ್ತರ ನೀಡದೆ ಹೊರ ನಡೆದರು.
ಈ ಮಧ್ಯೆ ಡಿಡಿಪಿಐ ಕಚೇರಿಯಲ್ಲಿ ಪತ್ರಾಂಕಿತರಾಗಿ ಕಾರ್ಯ ನಿರ್ವಹಿಸುತ್ತಿರುವ ಅನಂತರಾಮು ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಜಿ.ಪಂ. ಅಧ್ಯಕ್ಷೆ, ಉಪಾಧ್ಯಕ್ಷೆ, ಸಿಇಓ ಅವರು ಸನ್ಮಾನದಲ್ಲಿ ಪಾಲ್ಗೊಳ್ಳುವ ಮೊದಲೇ ಜಿ.ಪಂ. ಸದಸ್ಯ ವೈ.ಹೆಚ್. ಹುಚ್ಚಯ್ಯ, ಅನಂತರಾಮು ಅವರನ್ನು ಸನ್ಮಾನಿಸಿದರು. ಇದರಿಂದ ಕೋಪಗೊಂಡ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್ ನಾವು ಸನ್ಮಾನಕ್ಕೆ ಬರುವ ಮೊದಲು ನೀವು ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಧ್ಯಾಹ್ನ 1 ಗಂಟೆಗೆ ಕೋರಂ ಆದ ನಂತರ ಮತ್ತೆ ಜಿ.ಪಂ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಅನಂತರಾಮು ಅವರನ್ನು ಸನ್ಮಾನಿಸಿದರು.