ತುಮಕೂರು: ಜಿಲ್ಲೆಯ ವಿವಿಧೆಡೆ ಸರ್ಕಾರದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೆಂದ್ರಗಳನ್ನು ತೆರೆದಿದ್ದು, ರೈತರು ಸಾಲುಗಟ್ಟಿ ನಿಂತು ಮಾರಾಟಕ್ಕೆ ಮುಂದಾಗಿದ್ದಾರೆ.
ರಾಜ್ಯ ಮಾರಾಟ ಮಹಾ ಮಂಡಳಿ ರಾಗಿ ಖರೀದಿಯನ್ನು ಕಳೆದೆರಡು ದಿನಗಳಿಂದ ಆರಂಭಿಸಿದೆ. ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಕೆಂದ್ರದಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುತ್ತಿದ್ದು, ರೈತರು ಮಳೆಯನ್ನೂ ಲೆಕ್ಕಿಸದೆ ಕಿ.ಮೀ.ಗಟ್ಟಲೆ ಸಾಲಿನಲ್ಲಿ ಟ್ರ್ಯಾಕ್ಟರ್ಗಳನ್ನು ನಿಲ್ಲಿಸಿಕೊಂಡು ಮಾರಾಟಕ್ಕೆ ಮುಂದಾಗಿರುವುದು ಕಂಡುಬಂದಿದೆ.
ಪ್ರತಿ ಬಾರಿ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಮುಂಗಡವಾಗಿ ಟೋಕನ್ ನೀಡಿ ಮಾರಾಟದ ದಿನಾಂಕ ನೀಡಲಾಗುತ್ತಿತ್ತು. ಆದ್ರೆ ಈ ಬಾರಿ ಮಾರಾಟ ಮಳಿಗೆ ಬಳಿ ನಿಲ್ಲುತ್ತಿರೋ ಟ್ರ್ಯಾಕ್ಟರ್ಗಳಿಗೆ ನಂಬರ್ ನೀಡಲಾಗುತ್ತಿದೆ. ಇದರಿಂದ ರೈತರು ಮುಗಿಬಿದ್ದು ಸರದಿ ಸಾಲಿನಲ್ಲಿ ಟ್ರ್ಯಾಕ್ಟರ್ಗಳನ್ನು ತಂದು ನಿಲ್ಲಿಸುತ್ತಿದ್ದಾರೆ. ಎಪಿಎಂಸಿಯೋಳಗೆ ಎರಡು ಮೂರು ಸುತ್ತು ನಿಲ್ಲಿಸಿಕೊಂಡು ಮಳಿಗೆಗಳ ಮುಂದೆ ರೈತರು ವಾಸ್ತವ್ಯ ಹೂಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಬಾರಿ ಕುಣಿಗಲ್, ತಿಪಟೂರು, ತುರುವೇಕೆರೆ, ಹುಳಿಯಾರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಮಧುಗಿರಿ ಮತ್ತು ತುಮಕೂರಿನಲ್ಲಿ ರಾಗಿ ಖರೀದಿ ಕೆಂದ್ರಗಳನ್ನು ತೆರೆಯಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ ಶಿರಾದಲ್ಲಿ ಕೂಡ ಖರೀದಿ ಕೇಂದ್ರ ತೆರೆಯಲಾಗಿದೆ.